ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಮತ್ತು ಭಗ್ನಾವಶೇಷ ವಿಲೇವಾರಿ ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ದಂಡವನ್ನೂ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ನಗರದ ಹೊರವಲಯದಲ್ಲಿ ಪಾಲಿಕೆಯ ವ್ಯಾಪ್ತಿಯ ಹೊರಗಡೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಬದಿಯಲ್ಲಿ /ಇಕ್ಕೆಲಗಳಲ್ಲಿ ಅನಧಿಕೃತ ಅನಾಮಧೇಯ ವ್ಯಕ್ತಿಗಳಿಂದ / ಎಜೆನ್ಸಿಗಳಿಂದ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ಅನಧಿಕೃತ ವಿಲೇವಾರಿಯು ಅತಿರೇಕವಾಗಿ ನಡೆಯುತ್ತಿರುವುದನ್ನು ಗಮನಿಸಲಾಗಿದ್ದು, ಈ ಪ್ರವೃತ್ತಿಯು ನಗರಕ್ಕೆ ಸಂಚರಿಸುವ ಸಾರ್ವಜನಿಕರಲ್ಲಿ ಬೆಂಗಳೂರು ನಗರದ ಸ್ವಚ್ಛತೆಯ ಕುರಿತು ಋಣಾತ್ಮಕ ಮನೋಭಾವನೆಯನ್ನು ಉಂಟುಮಾಡುವುದಲ್ಲದೇ ನಗರದ ಘನತೆ ಕುಂದಿಸುತ್ತಿರುವುದನ್ನು ಅತೀ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಪಾಲಿಕೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದೆ.
ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ವೈಜ್ಞಾನಿಕ ಅಧಿಕೃತ ಸಂಗ್ರಹಣೆ, ಸಾಗಣೆ ಮತ್ತು ವಿಲೇವಾರಿಯ ಪ್ರಾಥಮಿಕ ಜವಾಬ್ದಾರಿಯು ತ್ಯಾಜ್ಯ ಉತ್ಪಾದಕರದ್ದಾಗಿರುತ್ತದೆ. ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಅಧಿಕೃತವಾಗಿ ಗುರುತಿಸಿದ ಸಂಸ್ಕರಣ ಘಟಕಗಳಿಗೆ ಸಾಗಿಸಿ ವಿಲೇವಾರಿಯನ್ನು ಕೈಗೊಳ್ಳಬೇಕಾಗಿರುತ್ತದೆ. ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯವನ್ನು ಅನಧಿಕೃತವಾಗಿ ಎಲ್ಲೆಂದರಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳ ಬದಿಯಲ್ಲಿ ಇಕ್ಕೆಲಗಳಲ್ಲಿ, ಚರಂಡಿಗಳಲ್ಲಿ, ಖಾಲಿ ನಿವೇಶನಗಳಲ್ಲಿ ಅಥವಾ ಕ್ವಾರಿಗಳಲ್ಲಿ ಸುರಿಯುವುದನ್ನು ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ನಿರ್ವಹಣಾ ನಿಯಮಗಳು-2016ರನ್ವಯ ನಿಷೇಧಿಸಲಾಗಿದ್ದು, ದಂಡಾರ್ಹ ಮತ್ತು ಕಾನೂನಾತ್ಮಕವಾಗಿ ಅಪರಾಧವಾಗಿದೆ ಎಂದು ಪಾಲಿಕೆ ತಿಳಿಸಿದೆ.
ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ಅನಧಿಕೃತ ವಿಲೇವಾರಿಗಾಗಿ ತ್ಯಾಜ್ಯ ಉತ್ಪಾದಕರನ್ನೊಳಗೊಂಡಂತೆ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣೆ/ವಿಲೇವಾರಿದಾರರಿಗೂ ಸಹ ನಿಯಮಾವಳಿಗಳನ್ವಯ (ರೂ.10,000 ಪ್ರತಿ ಟನ್‌ಗೆ) ದಂಡವನ್ನು ವಿಧಿಸಲಾಗುವುದು ಮತ್ತು ಪರಿಸರ (ಸಂರಕ್ಷಣೆ) ಕಾಯ್ದೆ 1986ರನ್ವಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖೇನ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಾಗುವುದು. ನಗರದ ಹೊರವಲಯದಲ್ಲಿ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ಅನಧಿಕೃತ ವಿಲೇವಾರಿಗಾಗಿ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಾಲಿಕೆಯ ಎಲ್ಲಾ ಸೂಪರವೈಸರ್/ಕಿರಿಯ ಆರೋಗ್ಯ ಪರಿವೀಕ್ಷಕರು/ವಾರ್ಡ ಮಾರ್ಷಲ್ಸ್/ ಮಾರ್ಷಲ್ ಸೂಪರವೈಸರ್ ರವರುಗಳ ಮುಖೇನ ತಪಾಸಣೆಗೆ ಒಳಪಡಿಸಿ ನಿಯಮಾವಳಿಗಳನ್ವಯ ದಂಡವನ್ನು ವಿಧಿಸಿ ಸದರಿ ವಾಹನಗಳನ್ನು ವಶಪಡಿಸಿಕೊಂಡು ಹತ್ತಿರದ ಪೊಲೀಸ್ ಠಾಣೆಯ ಸುಪರ್ದಿಗೆ ಮುಂದಿನ ಕ್ರಮಕ್ಕಾಗಿ ನೀಡಲಾಗುವುದು ಎಂದು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಆರ್. ಪ್ರತಿಭಾ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಮತದಾನದಂತೆ ಸಾಮಾಜಿಕ ಜಾಲತಾಣ ಬಳಕೆಗೂ ವಯೋಮಿತಿ ನಿಗದಿಗೆ ಹೈಕೋರ್ಟ್ ಸಲಹೆ