ಬೆಂಗಳೂರು :ತಾನು ನಿತ್ಯ ಊಟ ಹಾಕುತ್ತಿದ್ದ ಬೀದಿ ನಾಯಿಗಳು ಕಣ್ಮರೆ ಆಗಿವೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಶೇಷಾದ್ರಿಪುರಂ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. 10 ವರ್ಷಗಳಿಂದ ತಾವು ಊಟ ಹಾಕುತ್ತಿದ್ದ ನಾಯಿಗಳನ್ನು ಮನೆ ಸಮೀಪದ ಕೆಲಸಗಾರನೊಬ್ಬ ಬೇರೆಡೆ ಬಿಟ್ಟು ಬಂದಿರುವುದಾಗಿ ಸಂಭವ ಪ್ರಕಾಶ್ ಎಂಬುವರು ದೂರಿದ್ದಾರೆ.
ದೂರುದಾರರಾದ ಸಂಭವ ಪ್ರಕಾಶ್ ಶೇಷಾದ್ರಿಪುರಂ ವ್ಯಾಪ್ತಿಯ ಕುಮಾರ ಪಾರ್ಕ್ ವೆಸ್ಟ್ ಬಳಿಯ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕಂಪನಿಯಿರುವ ಕಟ್ಟಡದ ಮೊದಲನೇ ಮಹಡಿಯಲ್ಲಿ ಅದರ ಮಾಲೀಕ ವೆಪಲವಿ ಮಹೇಂದ್ರರ ಮನೆಯಿದೆ. ಕಳೆದ 15 ವರ್ಷಗಳಿಂದ ಲಂಡನ್‌ನಲ್ಲಿ ನೆಲೆಸಿರುವ ಮಹೇಂದ್ರ, ಬೆಂಗಳೂರಿನ ತಮ್ಮ ಮನೆ ಬಳಿಯಿರುವ ಬೀದಿ ನಾಯಿಗಳಿಗೆ ನಿತ್ಯ ಊಟ ಹಾಕುವ ಜವಾಬ್ದಾರಿಯನ್ನ ಪ್ರಕಾಶ್ಗೆ ವಹಿಸಿದ್ದರು. ಹಾಗೂ ವರ್ಷಕ್ಕೊಮ್ಮೆ ಬಂದಾಗ ತಾವೇ ಖುದ್ದು ನಾಯಿಗಳಿಗೆ ಊಟ ಹಾಕುವ ಅಭ್ಯಾಸ ರೂಢಿಸಿಕೊಂಡಿದ್ದರು. ಆದರೆ, ಅಕ್ಟೋಬರ್ 4ರ ನಂತರ ಮೂರೂ ನಾಯಿಗಳು ಕಣ್ಮರೆಯಾಗಿವೆ.
ನಗರದ ಹಲವೆಡೆ, ಅನಿಮಲ್ ಶೆಲ್ಟರ್ ಗಳಿರುವ ಕಡೆಗಳಲ್ಲಿ ನಾಯಿಗಳಿಗಾಗಿ ಹುಡುಕಾಟ ನಡೆಸಿರುವ ಪ್ರಕಾಶ್, ಕೆಲಸಗಾರನೊಬ್ಬ ನಾಯಿಗಳನ್ನ ಕರೆದೊಯ್ದು ಬೇರೆಡೆ ಬಿಟ್ಟಿದ್ದಾರೆ ಎಂದು ದೂರಿದ್ದು, ಎಲ್ಲಿ ಬಿಟ್ಟು ಬಂದಿದ್ದಾರೆ ಎಂಬುದನ್ನು ಬಾಯ್ಬಿಡುತ್ತಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಅಲ್ಲದೇ ಒಂದು ನಾಯಿಯನ್ನು ಹುಡುಕಿ ತಂದು ಕೊಟ್ಟರೆ ತಲಾ 10 ಸಾವಿರ ರೂ. ಹಾಗೂ ಮೂರೂ ನಾಯಿಗಳನ್ನು ಹುಡುಕಿ ತಂದು ಕೊಟ್ಟವರಿಗೆ 35 ಸಾವಿರ ರೂ. ಬಹುಮಾನ ನೀಡುವುದಾಗಿಯೂ ಅವರು ಘೋಷಿಸಿಕೊಂಡಿದ್ದಾರೆ. ಮತ್ತೊಂದೆಡೆ ಸಂಭವ ಪ್ರಕಾಶ್ ನೀಡಿರುವ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡ ಶೇಷಾದ್ರಿಪುರಂ ಪೊಲೀಸರು, ಪ್ರಕರಣದ ಕುರಿತಂತೆ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ- ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಇಂತಹದ್ದೇ ಇನ್ನೊಂದು ಪ್ರಕರಣ ವರದಿ ಆಗಿತ್ತು:ಇದೇ ರೀತಿ ಕಳೆದ ವರ್ಷ ರಿಯಾಲಿಟಿ ಶೋ ಸ್ಪರ್ಧಿ, ಮಾಡೆಲ್ ನಿರೂಷಾ ರವಿ ಅವರ ಮುದ್ದಿನ ನಾಯಿ ಕಳ್ಳತನವಾಗಿದ್ದು ಹುಡುಕಿಕೊಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು. ಸುಂಕದಕಟ್ಟೆಯ ಟೆಲಿಕಾಂ ಲೇಔಟ್ನಲ್ಲಿರುವ ತಮ್ಮ ಮನೆಯ ಬಳಿಯಿಂದ ಟ್ವಿಂಕಲ್ ಎಂಬ ಶಿಟ್ ಜೂ ತಳಿಯ ನಾಯಿ ಕಳ್ಳತನವಾಗಿದೆ. ಜುಲೈ 25ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಗಲು ತನಿಖೆ ಕೈಗೊಂಡಿದ್ದರು.