ಬೆಂಗಳೂರು :ಕೋವಿಡ್ ಎರಡನೇ ಅಲೆ ಇಷ್ಟೊಂದು ತೀವ್ರ ಮಟ್ಟದಲ್ಲಿ ಪರಿಣಾಮ ಬೀರಲು ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. ಚಾಮರಾಜಪೇಟೆಯ ವಿಧಾನಸಭಾ ಕ್ಷೇತ್ರದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿರುವ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಎಲ್ಲಾ ಅಸಂಘಟಿತ ಕಾರ್ಮಿಕ ವಲಯದವರಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.
2020ರ ನವಂಬರ್ ತಿಂಗಳಲ್ಲಿಯೇ ಕೋವಿಡ್ ಎರಡನೇ ಅಲೆ ಬಗ್ಗೆ ಆರೋಗ್ಯ ತಜ್ಞರು ಸರ್ಕಾರಕ್ಕೆ ವರದಿ ನೀಡಿದ್ದರು. ಆದರೆ, ಸರ್ಕಾರ ಇವರ ವರದಿಯನ್ನು ನಿರ್ಲಕ್ಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿರ್ಲಕ್ಷವೇ ಈ ಸಮಸ್ಯೆಗೆ ಕಾರಣ. ಇದರ ಪರಿಣಾಮವನ್ನು ನಾವು ಎರಡನೇ ಅಲೆಯಲ್ಲಿ ಕಂಡಿದ್ದೇವೆ. ಸಾವಿರಾರು ಮಂದಿ ಸಾವನ್ನಪ್ಪಿದನ್ನು ನಾವು ಕಂಡಿದ್ದೇವೆ.
ರಾಷ್ಟ್ರದ ಜನರ ಮಾನ-ಪ್ರಾಣ ರಕ್ಷಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಜನರ ಜೀವ ರಕ್ಷಿಸುವ ಜವಾಬ್ದಾರಿ ಯಡಿಯೂರಪ್ಪ ಅವರದ್ದಾಗಿದೆ. ಪ್ರತಿಪಕ್ಷದ ನಾಯಕರದ್ದಲ್ಲ. ನಾವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಹಾಗೂ ಹತ್ತು ಸಾವಿರ ರೂಪಾಯಿ ಸಹಾಯಧನ ನೀಡಿ ಎಂದು ಕೇಳಿದ್ದೆವು.
ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಆಚೆ ಬರಲು ಸಾಧ್ಯವಾಗುವುದಿಲ್ಲ. ಕೆಲಸ ಇಲ್ಲದ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಹಾಯಧನದಿಂದ ಇವರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದೆವು. ಆದರೆ, ನಮ್ಮ ಮಾತಿಗೆ ಸರ್ಕಾರ ಬೆಲೆ ಕೊಡಲಿಲ್ಲ ಎಂದರು.
ಜನರ ಜೀವ ಉಳಿಸುವುದಕ್ಕೆ ವ್ಯಾಕ್ಸಿನೇಷನ್ ಮಾಡಿಸುವುದು ಮಾತ್ರ ಪರಿಹಾರ. ಜನರ ಜೀವನ ರಕ್ಷಿಸುವ ನಿಜವಾದ ಕಾಳಜಿ ಇದ್ದರೆ ದೇಶದ 130 ಕೋಟಿ ಜನರಿಗೆ ಆದಷ್ಟು ಬೇಗ ವ್ಯಾಕ್ಸಿನೇಷನ್ ಕೊಡಿಸಿ. ವ್ಯಾಕ್ಸಿನ್ ದೇಶಕ್ಕೆ ಬಂದು ಸಾಕಷ್ಟು ದಿನ ಆಗಿದೆ.