ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲಾ ತರಬೇತಿ ರಹಿತ ಶಿಕ್ಷಕರ ವೇತನ ಶ್ರೇಣಿಯನ್ನು ತರಬೇತಿ ಹೊಂದಿದ ಶಿಕ್ಷಕರ ವೇತನ ಶ್ರೇಣಿಗೆ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಾಥಮಿಕ ಶಾಲೆಗಳ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಶಿಕ್ಷಕರ ವಿದ್ಯಾರ್ಹತೆಯ ಆಧಾರದ ಮೇಲೆ ತರಬೇತಿ ಹೊಂದಿದ ಶಿಕ್ಷಕರು ಮತ್ತು ತರಬೇತಿ ರಹಿತ ಶಿಕ್ಷಕರು ಎಂದು ಎರಡು ಪ್ರತ್ಯೇಕ ವೃಂದಗಳು ಇದ್ದು, ಈ ಎರಡೂ ವೃಂದಗಳ ವೇತನ ಶ್ರೇಣಿಗಳು ಬೇರೆ ಬೇರೆಯಾಗಿರುತ್ತವೆ. ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವ, ನೇಮಕಗೊಂಡರೂ ತರಬೇತಿ ಹೊಂದದ ಶಿಕ್ಷಕರ ಹುದ್ದೆಯಲ್ಲಿಯೇ ಮುಂದುವರೆದ ಹಾಗೂ 50 ವರ್ಷಗಳ ವಯೋಮಿತಿಯನ್ನು ದಾಟಿದ ಶಿಕ್ಷಕರ ಮತ್ತು ಶಿಕ್ಷಕರ ಸಂಘದ ಬೇಡಿಕೆಯಂತೆ ತರಬೇತಿ ಹೊಂದದ ಶಿಕ್ಷಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರ ವೇತನ ಶ್ರೇಣಿಯನ್ನು ತರಬೇತಿ ಹೊಂದಿದ ಶಿಕ್ಷಕರ ಹುದ್ದೆಯ ವೇತನ ಶ್ರೇಣಿಗೆ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಲಾಗಿದೆ.
ಹೈಕೋರ್ಟ್ ಹಾಗೂ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನಿರ್ದೇಶನದಂತೆ ನಿಗದಿತ ವಿದ್ಯಾರ್ಹತೆಯನ್ನು ಹೊಂದಿಲ್ಲದೆ ಪ್ರಾಥಮಿಕ ಶಾಲಾ ತರಬೇತಿ ರಹಿತ (ಹೊಂದದ) ಶಿಕ್ಷಕರ ಹುದ್ದೆಯಲ್ಲಿ ಕನಿಷ್ಠ 15 ವರ್ಷ ಸೇವೆಯನ್ನು ಪೂರ್ಣಗೊಳಿಸಿದ ಶಿಕ್ಷಕರ ವೇತನವನ್ನು ಪ್ರಾಥಮಿಕ ಶಾಲಾ ತರಬೇತಿ ಹೊಂದಿದ ಶಿಕ್ಷಕರ ಹುದ್ದೆಯ ವೇತನ ಶ್ರೇಣಿಯಲ್ಲಿ 2011 ರ ಸರ್ಕಾರಿ ಆದೇಶ ಹಾಗೂ 2019 ರ ಆದೇಶಗಳ ನಿಯಮಾನುಸಾರ ನಿಗದಿಪಡಿಸಲಾಗಿದೆ.