ಬೆಂಗಳೂರು:ರಾಜ್ಯದಲ್ಲಿ ಮಳೆ ಹಾನಿ ಸಂಬಂಧ 1,102 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಲು ನಿರ್ಧರಿಸಿದೆ. ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಕಳೆದ ನಾಲ್ಕು ತಿಂಗಳಿನಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ಅಪಾರ ಹಾನಿಯಾಗಿದೆ. ಪರಿಹಾರ ಕೋರುವ ಸಂಬಂಧ ಮನವಿ ಪತ್ರ ಸಿದ್ಧವಾಗಿದೆ ಎಂದರು.
ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳಿಂದ ಆಯಾ ಜಿಲ್ಲಾಧಿಕಾರಿಗಳು ವರದಿ ಕಳಿಸಿದ್ದಾರೆ. ಇದರ ಆಧಾರದ ಮೇಲೆ 1,102 ಕೋಟಿ ರೂ. ಪರಿಹಾರ ಕೋರಲು ನಿರ್ಧರಿಸಲಾಗಿದೆ. ಮಳೆಯಿಂದ ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ಹಲವು ರೀತಿಯ ನಷ್ಟವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಕಂಪನ ಸಂಭವಿಸಿದೆ. ಮಳೆಗೆ ಗುಡ್ಡ ಕುಸಿತ ಆಗಿದೆ ಎಂದ ಅವರು, ಇಂತಹ ಸಮಸ್ಯೆ ಪುನರಾವರ್ತನೆ ಆಗುವ ಬಗ್ಗೆ ಗಮನಿಸಿ, ಮುಂಜಾಗ್ರತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ನಿವೇಶನ ವಂಚನೆ ತಡೆಗೆ ಸರ್ಕಾರದಿಂದ ಏಜೆನ್ಸಿ ಸ್ಥಾಪನೆ :ನಿವೇಶನ, ಭೂಮಿ ಕೊಳ್ಳುವವರು ಮೋಸದ ಜಾಲಕ್ಕೆ ಸಿಲುಕದಂತೆ ರಕ್ಷಿಸಲು ಸರ್ಕಾರವೇ ಏಜೆನ್ಸಿಗಳನ್ನು ಸ್ಥಾಪಿಸಲು ಮುಂದಾಗಿದೆ. ಈ ಏಜೆನ್ಸಿಗಳು ಭೂಮಿ, ನಿವೇಶನ ಮಾರುವವರು ಮತ್ತು ಕೊಳ್ಳುವವರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಲಿವೆ. ಈ ಮೂಲಕ ವಂಚನೆ ಜಾಲಕ್ಕೆ ಬ್ರೇಕ್ ಹಾಕಲಿವೆ ಎಂದು ತಿಳಿಸಿದರು.
ಒಂದೇ ನಿವೇಶನವನ್ನು ಹಲವರಿಗೆ ನೋಂದಣಿ ಮಾಡಿಕೊಡುವ, ತಮ್ಮದಲ್ಲದ ನಿವೇಶನವನ್ನು ಮಾರುವ, ನಿವೇಶನದ ಹೆಸರಿನಲ್ಲಿ ವಂಚಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದೇ ರೀತಿ ಜಮೀನನ್ನು ವರ್ಗಾವಣೆ ಮಾಡಿಸಿಕೊಳ್ಳುವಾಗ ಸಹೋದರರನ್ನು ವಂಚಿಸಿ ತಮ್ಮ ಹೆಸರಿಗೆ ಮಾಡಿಸಿಕೊಳ್ಳುವ ಪ್ರಕರಣಗಳೂ ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರವೇ ಏಜೆನ್ಸಿಗಳನ್ನು ತೆರೆದು ಭೂಮಿ, ನಿವೇಶನ ಖರೀದಿಸುವವರು ಮೋಸದ ಜಾಲಕ್ಕೆ ಸಿಲುಕದಂತೆ ನೋಡಿಕೊಳ್ಳಲಿದೆ.