ಕರ್ನಾಟಕ

karnataka

ಆನ್‌ಲೈನ್ ಕಲಿಕಾ ವೇದಿಕೆ 'ಅನ್​ಅಕಾಡೆಮಿ' ಜತೆ ಒಡಂಬಡಿಕೆ ಮಾಡಿಕೊಂಡ ಸರ್ಕಾರ

By

Published : Jul 22, 2021, 4:08 PM IST

ಪ್ರತಿ 6 ತಿಂಗಳಿಗೊಮ್ಮೆ ಆನ್‌ಲೈನ್‌ ಪರೀಕ್ಷೆಗಳನ್ನು ನಡೆಸಿ ಅದರಲ್ಲಿ ಆಯ್ಕೆಯಾಗುವ 750 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಆ ವಿದ್ಯಾರ್ಥಿಗಳನ್ನು ಯಾವುದೇ ಶುಲ್ಕವಿಲ್ಲದೆ ಅನ್​ಅಕಾಡೆಮಿ ಚಂದಾದಾರರನ್ನಾಗಿ ಮಾಡಲಾಗುವುದು ಎಂದು ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

unacademy
unacademy

ಬೆಂಗಳೂರು: ರಾಷ್ಟ್ರೀಯ ಮಟ್ಟದ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ತೇರ್ಗಡೆಯಾಗಿ ಉದ್ಯೋಗ ಪಡೆಯಲು ಮಾರ್ಗದರ್ಶನ ನೀಡುವುದಕ್ಕೆ ರಾಜ್ಯ ಸರ್ಕಾರವು ದೇಶದ ಹೆಸರಾಂತ ಆನ್​ಲೈನ್‌ ಕಲಿಕಾ ವೇದಿಕೆ ʼಅನ್ಅಕಾಡೆಮಿʼ ಜೊತೆ ಒಪ್ಪಂದ ಮಾಡಿಕೊಂಡಿತು.

ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರ ಸಮಕ್ಷಮದಲ್ಲಿ ಇಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್‌ ಪ್ರಭಾಕರ್‌ ಹಾಗೂ ಅನ್​ಅಕಾಡೆಮಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿವೇಕ್‌ ಸಿನ್ಹಾ ಒಪ್ಪಂದಕ್ಕೆ ಸಹಿ ಹಾಕಿ ದಾಖಲೆ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ಈ ಒಪ್ಪಂದವು ಮೂರು ವರ್ಷ, ಅಂದರೆ 2021ರಿಂದ 2024ರವರೆಗೆ ಜಾರಿಯಲ್ಲಿರುತ್ತದೆ. ಈ ಮೂರು ವರ್ಷಗಳ ಅವಧಿಯಲ್ಲಿ ಪ್ರತೀ ವರ್ಷ 1,500 ವಿದ್ಯಾರ್ಥಿಗಳಂತೆ ಒಟ್ಟು 4,500 ವಿದ್ಯಾರ್ಥಿಗಳಿಗೆ ಅನ್​ಅಕಾಡೆಮಿ ಉಚಿತ ತರಬೇತಿ ನೀಡಲಿದೆ ಎಂದರು.

ಪ್ರತಿ 6 ತಿಂಗಳಿಗೊಮ್ಮೆ ಆನ್‌ಲೈನ್‌ ಪರೀಕ್ಷೆಗಳನ್ನು ನಡೆಸಿ ಅದರಲ್ಲಿ ಆಯ್ಕೆಯಾಗುವ 750 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಹಾಗೂ ಆ ವಿದ್ಯಾರ್ಥಿಗಳನ್ನು ಯಾವುದೇ ಶುಲ್ಕವಿಲ್ಲದೆ ಅನ್​ಅಕಾಡೆಮಿ ಚಂದಾದಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ಸರ್ಕಾರಿ ಪದವಿ, ಸ್ನಾತಕೋತ್ತರ, ಎಂಜನಿಯರಿಂಗ್‌, ಪಾಲಿಟೆಕ್ನಿಕ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷ ಅಥವಾ ಫ್ರೀ ಫೈನಲ್‌ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳು ಎಂದು ತಿಳಿಸಿದರು.

ಪ್ರಸ್ತುತ ಕೇಂದ್ರ ಆಡಳಿತ ಸೇವೆ, ಬ್ಯಾಂಕಿಂಗ್‌, ಗ್ರೂಪ್‌ ಸಿ ಸೇರಿದಂತೆ ವಿವಿಧ ವಲಯಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳಿಗೆ ಪ್ರತಿ ವರ್ಷ ಕೇಂದ್ರ ಸರಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳುತ್ತಿದೆ. ಆದರೆ, ಈ ಆಯ್ಕೆಯಲ್ಲಿ ಕನ್ನಡದ ವಿದ್ಯಾರ್ಥಿಗಳು ಹಿಂದೆ ಬೀಳುತ್ತಿದ್ದಾರೆ. ಇದನ್ನು ಸರಿಪಡಿಸುವ ಉದ್ದೇಶದಿಂದ ಅನ್​ಅಕಾಡೆಮಿ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಡಿಸಿಎಂ ತಿಳಿಸಿದರು.

ಈ ಕೋಚಿಂಗ್‌ ಮೂಲಕ ನಮ್ಮ ವಿದ್ಯಾರ್ಥಿಗಳ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲಾಗುವುದು. ಉತ್ತಮ ಫಲಿತಾಂಶ ಸಾಧಿಸಲಾಗುವುದು ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಸೇರಿದಂತೆ ಕೆಲ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details