ಬೆಂಗಳೂರು:2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾದ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ, ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಪರಿಹಾರ ಪಾವತಿಸಲು ಸರ್ಕಾರ ಮಂಜೂರಾತಿ ನೀಡಿದೆ. ಪ್ರವಾಹದಿಂದ ರಾಜ್ಯದ ಹಲವೆಡೆ ಜನ, ಜಾನುವಾರುಗಳ ಸಾವು, ಮನೆ, ಬೆಳೆ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳು ಹಾನಿಯಾಗಿತ್ತು. ಈ ಕುರಿತು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದರು.
2022ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ/ಪ್ರವಾಹದಿಂದ ಮನೆಗಳು ಹಾನಿಯಾದಂತಹ ಸಂತ್ರಸ್ತ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಎಸ್ಡಿಆರ್ಎಫ್/ಎನ್ಡಿಆರ್ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ಪರಿಷ್ಕೃತ ದರದಲ್ಲಿ ಪರಿಹಾರ ಪಾವತಿಸಲಾಗಿತ್ತು. ಅದೇ ರೀತಿ, 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ, ಪ್ರವಾಹದಿಂದ ಮನೆ ಹಾನಿ ಪ್ರಕರಣಗಳಿಗೆ ಪರಿಷ್ಕೃತ ದರದಲ್ಲಿ ಪರಿಹಾರ ಪಾವತಿಸಲು ಸರ್ಕಾರ ನಿರ್ಧರಿಸಿದೆ.
ಪರಿಷ್ಕೃತ ಪರಿಹಾರ ಹೀಗಿದೆ:
- ಶೇಕಡಾ 75ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿ ಎ ವರ್ಗಕ್ಕೆ 5 ಲಕ್ಷ ರೂಪಾಯಿ ಪರಿಹಾರ
- ಶೇ. 25ರಿಂದ ಶೇ. 75ರಷ್ಟು ತೀವ್ರ ಮನೆ ಹಾನಿ 'ಬಿ1' ವರ್ಗ (ದುರಸ್ತಿ)ಗೆ 3 ಲಕ್ಷ ರೂ. ಪರಿಹಾರ
- ಶೇ. 25ರಿಂದ ಶೇ. 75ರಷ್ಟು ತೀವ್ರ ಮನೆ ಹಾನಿ 'ಬಿ2'ವರ್ಗ (ಕೆಡವಿ ಹೊಸದಾಗಿ ನಿರ್ಮಿಸುವುದು)ಗೆ 5 ಲಕ್ಷ ರೂ. ಪರಿಹಾರ
- ಶೇ. 15-25ರಷ್ಟು ಭಾಗಶಃ ಮನೆ ಹಾನಿ - 'ಸಿ' ವರ್ಗಕ್ಕೆ 50,000 ರೂ. ಪರಿಹಾರ
ಅನುಸರಿಸಬೇಕಾದ ಷರತ್ತುಗಳು:2023ನೇ ಸಾಲಿನ ಮುಂಗಾರಿನಲ್ಲಿ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ವರೆಗೆ) ಅತಿವೃಷ್ಟಿ/ಪ್ರವಾಹದಿಂದ ಮನೆ ಹಾನಿ ಉಂಟಾಗಿರಬೇಕು. ಜಿಲ್ಲಾಧಿಕಾರಿಗಳು ಜಂಟಿ ತಂಡ ರಚಿಸಿ ತಂಡದವರಿಂದ ಸಂತ್ರಸ್ತರ ವಿವರಗಳನ್ನು ಪಡೆದು ನಿಯಮಾನುಸಾರ ಎ, ಬಿ1, ಬಿ2 ಅಥವಾ ಸಿ ವರ್ಗಕ್ಕೆ ಸೇರಿಸುವ ಬಗ್ಗೆ ಅರ್ಹತೆ ಪರಿಶೀಲಿಸಿ ಫಲಾನುಭವಿಗಳನ್ನು ಅನುಮೋದಿಸಬೇಕು.