ಬೆಂಗಳೂರು:ಅಗರಬತ್ತಿ ಉದ್ಯಮಕ್ಕೆ ಎಲ್ಲ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಯ ನೀಡಿದ್ದಾರೆ.
ಗುರುವಾರ ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘದ ವತಿಯಿಂದ ಆಯೋಜಿಸಿದ್ದ ಐಮಾ ಎಕ್ಸ್ ಪೋ (AIAMA )2022ನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಗರಬತ್ತಿ ಉದ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಈ ಉದ್ಯಮ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ರಾಜ್ಯ ಸರ್ಕಾರವು ಸಣ್ಣ ಪುಟ್ಟ ಸಮುದಾಯಗಳಾದ ಕುಂಬಾರ, ಕಮ್ಮಾರ, ಚಮ್ಮಾರ ಸೇರಿದಂತೆ ಇತರ ಸಮುದಾಯಗಳಿಗೆ ಸಾಲ ನೀಡುವ ಯೋಜನೆ ಜಾರಿಗೆ ತರುತ್ತಿದೆ. ಆರ್ಥಿಕತೆ ಕೆಳ ಸ್ಥರದಿಂದ ಬಲಗೊಳ್ಳುತ್ತದೆ ಎಂದು ನಂಬಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಪರಿಮಳದ ಜೊತೆಗೆ ಸಂತೋಷ ಹರಡುವ ಕೆಲಸ: ಅಗರಬತ್ತಿ ಉದ್ಯಮ ಪರಿಮಳದ ಜೊತೆಗೆ ಸಂತೋಷ ಹರಡುವ ಕೆಲಸ ಮಾಡುತ್ತಿದೆ. 250 ವರ್ಷಗಳಿಂದ ಪರಿಮಳದ ಜೊತೆಗೆ ಸಂತೋಷ ಹರಡುತ್ತಿದ್ದೀರಿ. ಯಾವುದೇ ಉದ್ಯಮ ಈ ರೀತಿ ಇಲ್ಲ. ಸಣ್ಣ ಸಣ್ಣ ಸಂತೋಷಗಳು ದೊಡ್ಡ ಸಂಭ್ರಮ ನೀಡುತ್ತಿವೆ. ಅಗರಬತ್ತಿ ಉದ್ಯಮಮಕ್ಕೆ ದೊಡ್ಡ ಇತಿಹಾಸವಿದೆ ಎಂದು ಸಿಎಂ ಹೇಳಿದರು.