ಡಿಸಿಎಂ ಡಿಕೆ ಶಿವಮಕುಮಾರ್ ಹೇಳಿಕೆ
ಬೆಂಗಳೂರು:ಇಂಡಿಯಾ ಹೆಸರನ್ನು ಭಾರತ ಎಂದು ಮರು ನಾಮಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಗೆ ಸಿಎಂ ಸಿದ್ದರಾಮಯ್ಯ ಆದಿಯಾಗಿ ರಾಜ್ಯ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ ಮರು ನಾಮಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಭಾರತವನ್ನು ಸಂವಿಧಾನದಲ್ಲಿ ಇಂಡಿಯಾ ಎಂದೇ ಉಲ್ಲೇಖಿಸಲಾಗಿದ್ದು, ಇಂಡಿಯಾ ಎಂಬುದು ಎಲ್ಲರೂ ಒಪ್ಪಿರುವ ಹೆಸರಾಗಿದೆ. ಭಾರತ ಎಂದು ಮರುನಾಮಕರಣ ಮಾಡುವ ಅಗತ್ಯ ಇಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಭಯದಿಂದ ಹೆಸರು ಬದಲಾವಣೆ:ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಇಂಡಿಯಾ ಹೆಸರು ಬದಲಾವಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನಕಪುರದಲ್ಲಿ ಮಾತನಾಡಿದ ಅವರು, ಪ್ರತಿ ಪಕ್ಷಗಳ ಮೈತ್ರಿಕೂಟಕ್ಕೆ ಹೆದರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ರಿಪಬ್ಲಿಕ್ ಆಫ್ ಇಂಡಿಯಾ ಅನ್ನು ರಿಪಬ್ಲಿಕ್ ಆಫ್ ಭಾರತ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಮುಂದಿನ ಚುನಾವಣೆಯಲ್ಲಿ ಸೋಲನ್ನು ನೋಡುತ್ತಿರುವುದನ್ನು ಈ ಸಮಯದಲ್ಲಿ ಗಮನಿಸಬಹುದು. ನಮ್ಮ ದೇಶದ ನಗದಿನ ಮೇಲೆ ಇಂಡಿಯಾ ಅಂತಾ ಇದೆ. ಇದನ್ನು ಬದಲಿಸಲು ಹೊರಟಿದ್ದಾರೆ. ನಾವೆಲ್ಲರೂ ಭಾರತೀಯರೇ. ಸೋಲಿಗೆ ಹೆದರಿ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಅವರ ಆಲೋಚನೆಗಳು ಇನ್ನು ಬಹಳ ಇದಾವೆ. ಅವುಗಳನ್ನು ಈಗ ಹೇಳಿದರೆ ಎಲ್ಲರೂ ಶಾಕ್ ಆಗುತ್ತಾರೆ. ಅವುಗಳನ್ನು ಬೇರೆ ಸಮಯದಲ್ಲಿ ಮಾತನಾಡುತ್ತೇನೆ. ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಈ ಪ್ರಸ್ತಾವನೆಯನ್ನು ವಿರೋಧಿಸುತ್ತೇನೆ. ಇಂತಹ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ನೀವು ಹೆಚ್ಚು ದಿನ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ. ಇದನ್ನು ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.
ಹೆಸರು ಬದಲಿಸಿದರೆ ದೇಶ ಬದಲಾಗಲಿದೆಯಾ?:ಸಚಿವ ದಿನೇಶ್ ಗುಂಡೂರಾವ್ ಇಂಡಿಯಾ ಹೆಸರು ಬದಲಾವಣೆಗೆ ಟ್ವೀಟ್ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿ ಪಕ್ಷಗಳ ಮೈತ್ರಿಕೂಟಕ್ಕೆ 'INDIA' ಎಂಬ ಹೆಸರಿಟ್ಟ ಕಾರಣಕ್ಕೆ ಕೇಂದ್ರ ಸರ್ಕಾರ ದೇಶದ ಹೆಸರನ್ನು 'INDIA'ದ ಬದಲು 'ಭಾರತ' ಎಂದು ಬದಲಾಯಿಸಲು ಮುಂದಾಗಿದೆ. INDIA ಮೈತ್ರಿಕೂಟದ ಬಗ್ಗೆ ಬಿಜೆಪಿಯವರಿಗೆ ಇಷ್ಟೊಂದು ಭಯವೆ?. ದೇಶದ ಹೆಸರು ಮರುನಾಮಕರಣಕ್ಕೆ 'INDIA' ಮೈತ್ರಿಕೂಟದ ಮೇಲಿನ ಭಯವಲ್ಲದೆ ಮತ್ತೇನು ಕಾರಣ ಮೋದಿಯವರೆ?. INDIA ಹೆಸರನ್ನು 'ಭಾರತ' ಎಂದು ಬದಲಿಸಿದರೆ ದೇಶ ಬದಲಾಗಲಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಮೋದಿಯವರೇ ಬದಲಾಗಬೇಕಿರುವುದು ದೇಶದ ಹೆಸರಲ್ಲ, ಬದಲಿಗೆ ದೇಶದ ಪರಿಸ್ಥಿತಿ. ಹೆಸರು ಬದಲಾಯಿಸುವ ಬದಲು ಜನರ ಜೀವನ ಮಟ್ಟ ಬದಲಾಯಿಸಿ. ದ್ವೇಷದ ಮೂಲಕ ಸಮಾಜದ ಶಾಂತಿ ಕೆಡಿಸುತ್ತಿರುವ ನಿಮ್ಮ ಭಕ್ತರ ಮನಸ್ಸು ಬದಲಾಯಿಸಿ. ಈ ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಬದಲಾಯಿಸಿ. INDIA ಮತ್ತು ಭಾರತ ಎರಡೂ ಹೆಸರುಗಳು ನಮ್ಮ ಎದೆಯೊಳಗೆ ಅಜರಾಮರವಾಗಿವೆ. ಇಂಡಿಯಾ ಎಂದರೆ ಬೇರೆಯಲ್ಲ, ಭಾರತ ಎಂದರೆ ಬೇರೆಯಲ್ಲ. ಸದುದ್ದೇಶದಿಂದ INDIA ಬದಲು ಭಾರತ ಎಂದು ಮರುನಾಮಕರಣ ಮಾಡಿದರೆ ಆಕ್ಷೇಪಣೆಯಿಲ್ಲ. ಆದರೆ, ಪ್ರತಿ ಪಕ್ಷಗಳ ಒಕ್ಕೂಟ INDIA ಹೆಸರನ್ನು ಅಪ್ರಸ್ತುತಗೊಳಿಸಲು ದೇಶದ ಹೆಸರು ಬದಲಾಯಿಸಲು ಹೊರಟಿರುವುದು ಮೂರ್ಖತನ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಿಂದ ಆಕ್ಷೇಪ: ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ, ದೇಶದ ಪರ ಕಾಳಜಿ ಹಾಗೂ ಪ್ರಗತಿಪರ ಚಿಂತನೆಯುಳ್ಳ ಸಮಾನ ಮನಸ್ಕ ರಾಜಕೀಯ ಪಕ್ಷಗಳ ಒಕ್ಕೂಟವು INDIA ಹೆಸರನ್ನು ಹೊಂದಿದ್ದಕ್ಕೆ ಕೇಂದ್ರ ಸರ್ಕಾರ ದೇಶಕ್ಕಿರುವ ಇಂಡಿಯಾ ಹೆಸರನ್ನೇ ಕೈಬಿಡಲು ಮುಂದಾಗಿರುವುದು ಅಸಹನೆ ಮತ್ತು ದ್ವೇಷದ ಪರಮಾವಧಿ ಎಂದು ಆರೋಪಿಸಿದೆ. ದೇಶ ಬದಲಿಸುತ್ತೇವೆ ಎಂದು ಬಂದವರು ದ್ವೇಷದಿಂದ ದೇಶದ ಹೆಸರು ಬದಲಿಸುವುದು ದುರಂತ. ಇವರೇ ಇಟ್ಟಿರುವ Skill india, Make in india ಹೆಸರುಗಳನ್ನು ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: INDIA vs Bharat... ಈ ಎರಡೂ ಹೆಸರುಗಳ ಸುತ್ತಲಿನ ಇತಿಹಾಸ ಏನು.. ಏನಿದರ ಸಂಕ್ಷಿಪ್ತ ನೋಟ!