ಕರ್ನಾಟಕ

karnataka

ETV Bharat / state

ರಾಜ್ಯ ಬಜೆಟ್​ 2023: ಮೀನುಗಾರಿಕೆಗೆ ಸಿಕ್ಕ ಬಂಪರ್​ ಗಿಫ್ಟ್​ಗಳೇನು?​ - ರಾಜ್ಯ ಸರ್ಕಾರದ ಕೊನೆಯ ಬಜೆಟ್​ ಮಂಡನೆ

ರಾಜ್ಯ ಬಜೆಟ್​ 2023- ಮೀನುಗಾರಿಕೆಗೆ ವಿಶೇಷ ಆಧ್ಯತೆ- ಮೀನುಗಾರರಿಗೆ 10,000 ವಸತಿ ನಿರ್ಮಾಣಕ್ಕೆ ತೀರ್ಮಾನ

fisheries
ಮೀನುಗಾರಿಕೆಗೆ ವಿಶೇಷ ಆಧ್ಯತೆ

By

Published : Feb 17, 2023, 2:13 PM IST

ಬೆಂಗಳೂರು:ಪ್ರಸ್ತುತ ರಾಜ್ಯ ಸರ್ಕಾರದ ಕೊನೆಯ ಬಜೆಟ್​ ಮಂಡನೆಯಾಗಿದ್ದು, ಮೀನುಗಾರಿಕೆಗೆ ವಿಶೇಷ ಆದ್ಯತೆಯನ್ನು ನೀಡಲಾಗಿದೆ. ಮೀನುಗಾರಿಕೆ ನೆರವಾಗಲು 62 ಎಫ್​ಎಫ್​ಪಿಒಗಳ ಸ್ಥಾಪನೆಗೆ 12,175 ಮೀನುಗಾರಿಕೆ ಕಿಸಾನ್ ಕಾರ್ಡ್​ ವಿತರಣೆಗೆ ನಿರ್ಧರಿಸಲಾಗಿದೆ. ಉತ್ತಮ ತಳಿಯ ಬಲಿತ ಬಿತ್ತನೆ ಮೀನು ಮರಿ ದಾಸ್ತಾನಿಗೆ ಪ್ರೋತ್ಸಾಹಿಸಲು 20 ಕೋಟಿ ರೂ. ಅನುದಾನ ಘೋಷಿಸಲಾಗಿದೆ.

ಮೀನುಗಾರರಿಗೆ ವಸತಿ ನಿರ್ಮಾಣ: ಮೀನುಗಾರಿಕೆ ವಸತಿ ಸೌಕರ್ಯ ಕಲ್ಪಿಸಲು ವಸತಿ ರಹಿತರಿಗೆ ಕಳೆದ ಬಜೆಟ್​ನಲ್ಲಿ 5000 ಮನೆಗಳ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಈ ಬಾರಿ 10,000 ವಸತಿ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಮೀನುಗಾರರ ಹಾಗೂ ದೋಣಿಗಳ ಸುರಕ್ಷತೆಗಾಗಿ 17 ಕೋಟಿ ರೂಗಳ ಅನುದಾನದಲ್ಲಿ ಇಸ್ರೋ ಅಭಿವೃದ್ಧಿಪಡಿಸಿರುವ ಜಿಪಿಎಸ್​ ಸಂವಹನ ವ್ಯವಸ್ಥೆಯನ್ನು ಎಲ್ಲ ಯಾಂತ್ರೀಕೃತ ಮೀನುಗಾರಿಕೆ ದೋಣಿಕೆ ಅಳವಡಿಕೆ ಮಾಡಲು ಯೋಜಿಸಲಾಗಿದೆ. ಇದರಿಂದಾಗಿ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ದೋಣಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.

ಮತ್ಸ್ಯ ಸಿರಿ ಯೋಜನೆ: ಮೀನುಗಾರರ ದೋಣಿಗಳಿಗಾಗಿ ರಿಯಾಯಿತಿ ನೀಡುತ್ತಿರುವ ಡೀಸೆಲ್​ನ ಮಿತಿಯನ್ನು 1.5 ಲಕ್ಷ ಲೀಟರ್​ಗಳಿಂದ 2 ಲಕ್ಷಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಸರ್ಕಾರದಿಂದ 250 ಕೋಟಿ ರೂಗಳ ನೆರವು ಮೀನುಗಾರರಿಗೆ ಸಿಗಲಿದೆ. ಆಳ ಸಮುದ್ರ ಮೀನುಗಾರಿಕೆಯನ್ನು ಇನ್ನಷ್ಟು ಉತ್ತೇಜಿಸಲು ಮತ್ಸ್ಯ ಸಿರಿ ಯೋಜನೆಯನ್ನು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ರೂಪಿಸಲಾಗಿದೆ. ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯವನ್ನು ಉತ್ತಮಪಡಿಸಲು ಕರಾವಳಿ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕೃತಕ ಬಂಡೆ ಸಾಲುಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಬಜೆಟ್​ನಲ್ಲಿ ಪ್ರಕಟಿಸಿದ್ದಾರೆ.

ಇದನ್ನೂ ಓದಿ:ಕರ್ನಾಟಕ ಬಜೆಟ್​ 2023: ಬಜೆಟ್​ನಲ್ಲಿ ಗ್ರಾಮೀಣಾವೃದ್ಧಿ ಕ್ಷೇತ್ರಕ್ಕೆ ಭರಪೂರ ಕೊಡುಗೆ

ಉತ್ತರ ಕರ್ನಾಟಕದಲ್ಲೂ ಮೀನು ಕೃಷಿಗೆ ಪ್ರೋತ್ಸಾಹ: ಕೇವಲ ಕರಾವಳಿ ಭಾಗವಲ್ಲದೇ, ಉತ್ತರ ಕರ್ನಾಟಕ ಭಾಗದಲ್ಲಿ ಮೀನು ಕೃಷಿಯನ್ನು ಪ್ರೋತ್ಸಾಹಿಸಲು ಹಾವೇರಿ ಜಿಲ್ಲೆಯಲ್ಲಿ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರಗಳನ್ನು ಸ್ಥಾಪಿಸಲು ಘೋಷಿಸಲಾಗಿದೆ. ಜನರಿಗೆ ಗುಣಮಟ್ಟದ ಮೀನು ಉತ್ಪನ್ನಗಳನ್ನು ಪೂರೈಸಲು ಪರಿಸರಸ್ನೇಹಿ ತ್ರಿಚಕ್ರ ಮೀನು ಮಾರಾಟ ವಾಹನಗಳನ್ನು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಒದಗಿಸಲು ತೀರ್ಮಾನಿಸಲಾಗಿದೆ.

ಸೀಮೆಎಣ್ಣೆ ಬೆಲೆಯ ಏರಿಳಿತದಿಂದ ದೋಣಿಗಾರರಿಗೆ ಉಂಟಾಗುವ ಆರ್ಥಿಕ ಸಂಕಷ್ಟವನ್ನು ಪರಿಗಣಿಸಿ ಮತ್ತು ಸೀಮೆಎಣ್ಣೆ ಬಳಕೆಯಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಮುಂದಿನ 2 ವರ್ಷಗಳಲ್ಲಿ ಸೀಮೆಎಣ್ಣೆ ಆಧಾರಿತ ದೋಣಿಗಳಿಗೆ ಪರ್ಯಾಯ ವ್ಯವಸ್ಥೆಗೆ ತೀರ್ಮಾನಿಸಲಾಗಿದೆ. ದೋಣಿಗಳಲ್ಲಿ ಪೆಟ್ರೋಲ್​ ಅಥವಾ ಡೀಸೆಲ್​ ಆಧಾರಿತ ಮೋಟಾ ಇಂಜಿನ್​ ಅನ್ನು ಅಳವಡಿಸಲು ತಲಾ 50 ಸಾವಿರ ರೂನಂತೆ ಸಹಾಯಧನ ನೀಡಲಾಗುವುದು ಎಂದು ಘೋಷಿಸಲಾಗಿದೆ. ಇದಕ್ಕಾಗಿ 40 ಕೋಟಿ ರೂಪಾಯಿಗಳನ್ನು ಮೀಸಲಿಡಲು ನಿರ್ಧರಿಸಲಾಗಿದೆ.

ಮೀನುಗಾರರಿಗೆ ನೀಡುತ್ತಿರುವ ಸೀಮೆಎಣ್ಣೆ ಸಹಾಯಧನದ ಪ್ರಕ್ರಿಯೆಯನ್ನು ಸರಳೀಕರಿಸಿ ಪ್ರಸಕ್ತ ಸಾಲಿನಿಂದ ಡಿಬಿಟಿ ಮುಖಾಂತರ ನೇರವಾಗಿ ಮೀನುಗಾರರ ಖಾತೆಗೆ ಜಮೆ ಮಾಡಲು ಯೋಜಿಸಲಾಗಿದೆ. ರಾಜ್ಯದ 8 ಮೀನುಗಾರಿಕೆ ಬಂದರುಗಳ ನ್ಯಾವಿಗೇಷನ್​ ಚಾನೆಲ್​ಗಳಲ್ಲಿ ಹೂಳೆತ್ತುವ ಕಾಮಗಾರಿಗಳನ್ನು ಕೈಗೊತ್ತಿಕೊಳ್ಳಲು ಟೆಂಡರ್​ ಕರೆಯಲಾಗಿದೆ. ಇದರಿಂದ ಮೀನುಗಾರಿಕೆ ದೋಣಿಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಮೀನಿನ ರಫ್ತು ಮತ್ತು ಮೌಲ್ಯವರ್ಧನೆಗಾಗಿ ಬೈಂದೂರು ತಾಲೂಕಿನ ಕಂಬದಕೋಣೆಯಲ್ಲಿ ಸೀ ಫುಡ್​ ಪಾರ್ಕ್​ ಅನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಬಜೆಟ್​​​​ನಲ್ಲಿ ಸಿಎಂ ಹೇಳಿದ್ದಾರೆ.

ಇದನ್ನೂ ಓದಿ:Karnataka Budget 2023: ರಾಜ್ಯ ಬಜೆಟ್ ಹೈಲೈಟ್ಸ್ - ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಹಂಚಿಕೆ?​

ABOUT THE AUTHOR

...view details