ಬೆಂಗಳೂರು:ರಾಷ್ಟ್ರಕವಿ ಕುವೆಂಪು ಅವರ 'ಜಯ ಭಾರತ ಜನನಿಯ ತನುಜಾತೆ' ನಾಡಗೀತೆಯ ಅವಧಿಯನ್ನು 2 ನಿಮಿಷ 30 ಸೆಕೆಂಡುಗಳಿಗೆ ಮಿತಿಗೊಳಿಸುವ ಕುರಿತು ಸಾಹಿತಿಗಳು, ಚಿಂತಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶೀಘ್ರ ನಿರ್ಣಯ ಕೈಗೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಪತ್ರ ಬರೆದಿದ್ದಾರೆ.
ನಾಡಗೀತೆ ಹಾಡಲು ಒಂದು ಕ್ರಮ ಬೇಕು. ಅದಕ್ಕೆ ಸಂಬಂಧಿಸಿದಂತೆ ತಜ್ಞರ ಸಭೆ ಕರೆಯುವ ಚಿಂತನೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ನಾಡಗೀತೆಯ ಅವಧಿ ನಿಗದಿಗೊಳಿಸಲು 2018ರ ನ. 14ರಂದು ನಡೆದ ಸಾಹಿತಿಗಳ, ಕನ್ನಡಪರ ಚಿಂತಕರ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನೂ ನಡಾವಳಿಯ ಸಮೇತ ಸಚಿವರಿಗೆ ಕ.ಸಾ.ಪ ಅಧ್ಯಕ್ಷ ಮನು ಬಳಿಗಾರ್ ಪತ್ರ ಬರೆದಿದ್ದಾರೆ.
2018ರ ಸಭೆಯಲ್ಲಿ, ನಾಡಗೀತೆಯನ್ನು 2.30 ನಿಮಿಷದಲ್ಲಿ ಹಾಡಿ ಮುಗಿಸಲು ಏಕಕಂಠದಿಂದ ಸಹಮತ ಸೂಚಿಸಲಾಗಿದೆ. ಇಷ್ಟೇ ಅವಧಿಯಲ್ಲಿ ಪೂರ್ಣ ಹಾಡನ್ನು ಹಾಡಿ ಮುಗಿಸಲು ಸಾಧ್ಯವಿದೆ ಎಂದೂ ತೋರಿಸಿಕೊಡಲಾಗಿದೆ. ಆ ನಡಾವಳಿಯನ್ನು ಆಗಿನ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಾಡಗೀತೆಯನ್ನು ಹಾಡಲು ಈವರೆಗೆ ಒಂದು ಕಾಲಮಿತಿ ಇಲ್ಲ. ಹೀಗಾಗಿ ಎಲ್ಲಿಯೇ ಹಾಡಲಿ ಕೆಲವೆಡೆ ಭಾವಗೀತೆ ಹಾಡಿದಂತೆ ನಾಲ್ಕೂವರೆ ನಿಮಿಷ ಹಾಡಲಾಗುತ್ತಿದೆ. ಅದರಲ್ಲಿ ಆಲಾಪಗಳು, ಪುನರಾವರ್ತನೆಗಳು, ಚಪ್ಪಾಳೆಗಳು ಇರುತ್ತವೆ. ನಾಡಗೀತೆ ಯಾವಾಗ ಮುಗಿಯುತ್ತದೆ ಎಂದು ಕೆಲವರು ಚಡಪಡಿಸುತ್ತಾರೆ. ಆಲಾಪಗಳಿಲ್ಲದೆ, ನಡುವೆ ವಾದ್ಯಗೋಷ್ಠಿಗೆ ಅವಕಾಶ ಕೊಡದೆ ನಾಡಗೀತೆ ಹಾಡಿ ಮುಗಿಸುವುದು ಗೌರವದ ಸಂಕೇತ ಎಂದೂ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.