ಬೆಂಗಳೂರು: ಎಸ್ಎಸ್ಎಲ್ಸಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಲೋ ಆ್ಯಪ್ ಮೂಲಕ ಹರಿದಾಡಿದ ಕಾರಣ, ಸದ್ಯ ಸಿಸಿಬಿ ಪೊಲೀಸರು ಹಾಗೂ ನಗರ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ. ನಿನ್ನೆಯಿಂದ ಆರಂಭವಾಗಿರುವ ಪಿಯುಸಿ ಪರೀಕ್ಷೆಯ ಕುರಿತು ನಿಗಾ ವಹಿಸಿದ್ದಾರೆ. ಪೂರ್ವ ಸಿದ್ಧತೆ ಪರೀಕ್ಷೆ ಪೇಪರ್ ಲೀಕ್ ಮಾಡಿದ್ದ ವಿದ್ಯಾರ್ಥಿಗಳು ಸೇರಿದಂತೆ, ಕಿಂಗ್‌ಪಿನ್ ಶಿವಕುಮಾರ್, ಬಸವರಾಜ್ , ಅಮೀರ್ ಅಹ್ಮದ್, ಅನಿಲ್ ಫ್ರಾನ್ಸಿಸ್ ಹಾಗೂ ಇವರ ಸಹಚರರ ಮೇಲೆ ಸಿಸಿಬಿ ಕಣ್ಣಿಟ್ಟಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪಿಗಳ ಮೇಲೆ ಸಿಸಿಬಿ ಪೊಲೀಸರ ಕಣ್ಣು
ಎಸ್ಎಸ್ಎಲ್ಸಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಲೋ ಆ್ಯಪ್ ಮೂಲಕ ಹರಿದಾಡಿದ ಕಾರಣ, ಸದ್ಯ ಸಿಸಿಬಿ ಪೊಲೀಸರು ಹಾಗೂ ನಗರ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.
ಇಷ್ಟು ಆರೋಪಿಗಳು ಈ ಹಿಂದೆ ಪಿಯುಸಿ ಪತ್ರಿಕೆ ಲೀಕ್ ಮಾಡಿದ ಕಾರಣ, ಸಿಸಿಬಿ ಇವರ ಮೇಲೆ ಕೋಕಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿತ್ತು. ನಂತರ ಇವರ ಪ್ರತಿಯೊಂದು ಚಲನವಲನದ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ, ಪಿಯುಸಿ ಪರೀಕ್ಷೆ ಸುಗಮವಾಗಿ ನಡೆಯಲು ಹದ್ದಿನ ಕಣ್ಣು ಇಡಲಾಗಿದೆ. ಕೋಕಾ ಆ್ಯಕ್ಟ್ ಹಾಕಿದ ಕಾರಣ ಕೆಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ ಆರೋಪಿಗಳು ಜೈಲಿನಲ್ಲಿದ್ದುಕೊಂಡು ಹೊರಗಿನ ಸಹಚರರನ್ನು ಸಂಪರ್ಕ ಮಾಡಿರುವ ವಿಚಾರ ತನಿಖಾಧಿಕಾರಿಗಳಿಗೆ ತಿಳಿದು ಬಂದಿದೆ. ಹೀಗಾಗಿ ಸಿಸಿಬಿ ಪೊಲೀಸರು ಕಿಂಗ್‌ಪಿನ್ ಸಹಚರರ ಮೇಲೆ ತೀವ್ರವಾಗಿ ಕಟ್ಟೆಚ್ಚರ ವಹಿಸಿ ತನಿಖೆ ಮುಂದುವರೆಸಿದ್ದಾರೆ.
ಎಸ್ಎಸ್ಎಲ್ಸಿ ಪೂರ್ವಭಾವಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು, ಬಂಗಾರಪೇಟೆ ಬಿಇಒ ಕೊಟ್ಟ ಮಾಹಿತಿ ಮೇರೆಗೆ 14 ಜನ ವಿದ್ಯಾರ್ಥಿಗಳನ್ನು ಉತ್ತರ ವಿಭಾಗದ CEN ಪೊಲೀಸ್ ಠಾಣೆ ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ವಿದ್ಯಾರ್ಥಿಗಳ ಮಾಹಿತಿ ಪ್ರಕಾರ ಪ್ರಶ್ನೆ ಪತ್ರಿಕೆ ಹಲೋ ಆ್ಯಪ್ ಮೂಲಕ ವೈರಲ್ ಆದ ಕಾರಣ ಯಾರೋ ಶೇರ್ ಮಾಡಿದ್ದನ್ನು ನಾವು ಪಡೆದಿದ್ದೇವೆ ಎಂಬ ಮಾಹಿತಿ ಬಿಚ್ಚಿಟ್ಟಿದ್ರು. ಹೀಗಾಗಿ ಸದ್ಯ ತಂತ್ರಜ್ಞಾನದ ಮೊರೆ ಹೋದ ಉತ್ತರ ವಿಭಾಗ ಪೊಲೀಸರು, ಹಲೋ ಆ್ಯಪ್ನಲ್ಲಿ ಯಾರು ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ರು ಅನ್ನುವ ಬಗ್ಗೆ ತಂತ್ರಜ್ಞಾನ ಅಧಿಕಾರಿಗಳಿಗೆ ತಿಳಿಸುವಂತೆ ಪತ್ರ ಬರೆದಿದ್ದಾರೆ.