ಕರ್ನಾಟಕ

karnataka

ETV Bharat / state

ನಾಳೆಯಿಂದ ರಾಜ್ಯದ 234 ಕೇಂದ್ರಗಳಲ್ಲಿ ಎಸ್ಎಸ್ಎಲ್​ಸಿ ಪರೀಕ್ಷಾ ಮೌಲ್ಯಮಾಪನ ಶುರು

ರಾಜ್ಯದಲ್ಲಿ ಒಟ್ಟು 234 ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೌಲ್ಯಮಾಪನ ನಡೆಯಲಿದೆ. ಈ ಕಾರ್ಯಕ್ಕಾಗಿ 63,796 ಶಿಕ್ಷಕರನ್ನು ನಿಯೋಜಿಸಲಾಗಿದೆ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

By

Published : Apr 22, 2022, 5:32 PM IST

ಬೆಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆ ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ನಡೆದಿತ್ತು. ಮೌಲ್ಯಮಾಪನ ಪ್ರಕ್ರಿಯೆಯು ನಾಳೆಯಿಂದ ಆರಂಭವಾಗಲಿದೆ. ಇಂದಿನಿಂದಲೇ ಆಯಾ ಜಿಲ್ಲೆಗಳ ಡಿಸಿಗಳು ಹಾಗೂ ಎಸಿಗಳು ಮೌಲ್ಯಮಾಪನಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ತಿದ್ದಾರೆ ಎಂದು ಎಸ್ಎಸ್​ಎಲ್​ಸಿ ಬೋರ್ಡ್​ ನಿರ್ದೇಶಕ ಗೋಪಾಲಕೃಷ್ಣ ಹೆಚ್.ಎನ್ ತಿಳಿಸಿದರು.

ಒಟ್ಟು 234 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಈ ಕಾರ್ಯಕ್ಕಾಗಿ 63,796 ಶಿಕ್ಷಕರನ್ನು ನಿಯೋಜಿಸಲಾಗಿದೆ. ನಾಳೆ ಸಂಜೆಯ ಹೊತ್ತಿಗೆ ಎಷ್ಟು ಶಿಕ್ಷಕರು ಹಾಜರು-ಗೈರು ಹಾಜರಾತಿ ಬಗ್ಗೆ ಮಾಹಿತಿ ಸಿಗಲಿದೆ. ಈಗಾಗಲೇ ಮೌಲ್ಯಮಾಪನ‌ ಹೇಗೆ ಮಾಡಬೇಕೆಂದು ಡಿಸಿ ಹಾಗೂ ಜೆಸಿಗಳಿಗೆ ತರಬೇತಿ ಕೊಡಲಾಗಿದೆ. ಪರೀಕ್ಷಾ ಕೇಂದ್ರದ ಸೌಕರ್ಯ ಕುರಿತು ಕೂಡ ಪರಿಶೀಲನೆ ನಡೆಸಲಾಗಿದೆ ಎಂದರು.

ಮೌಲ್ಯಮಾಪನ ಪ್ರಕ್ರಿಯೆಯು 23 ರಿಂದ ಶುರುವಾಗಿ ಮೇ 1-2 ರೊಳಗೆ ಪೂರ್ಣಗೊಳ್ಳಲಿದೆ. ಆ ನಂತರ ಫೈನಲೈಸ್ ಮಾಡಲು 10-15 ದಿನ ತೆಗೆದುಕೊಳ್ಳಲಿದ್ದೇವೆ. ಸಚಿವರು ತಿಳಿಸಿದ ಹಾಗೆಯೇ ಮೇ 2 ಅಥವಾ 3 ನೇ ವಾರದೊಳಗೆ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಿದ್ದೇವೆ ಎಂದು ತಿಳಿಸಿದರು. ಎಸ್ಎಸ್ಎಲ್​ಸಿ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಮೌಲ್ಯಮಾಪಕರು, ಸಿಬ್ಬಂದಿಯ ಸಂಭಾವನೆ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಕಳೆದ ವರ್ಷ 22 ರೂಪಾಯಿ ದರ ನಿಗದಿ ಮಾಡಲಾಗಿತ್ತು. ಈ ಬಾರಿ ಅದನ್ನ‌ 5% ಹೆಚ್ಚಳ ಮಾಡಲಾಗಿದೆ ಎಂದು ವಿವರಿಸಿದರು. ಪರಿಷ್ಕತ ದರ ಹೀಗಿದೆ..

*ಜಂಟಿ ಮುಖ್ಯ ಪರೀಕ್ಷಕರು- 7270 ರೂ.

*ಉಪ ಮುಖ್ಯ ಪರೀಕ್ಷಕರು- 5464 ರೂ.

ಉತ್ತರ ಪತ್ರಿಕೆ ಮೌಲ್ಯಮಾಪನ ದರಗಳು: (ಪ್ರತಿ ಪತ್ರಿಕೆಗೆ)

* ಪ್ರಥಮ ಭಾಷೆ- 23 ರೂ.
* ದ್ವಿತೀಯ/ತೃತೀಯ ಭಾಷೆ- 21 ರೂ.
* ಐಚ್ಛಿಕ ವಿಷಯಗಳು- 21 ರೂ.

ಭತ್ಯೆ

1) ದಿನಭತ್ಯೆ (ಬೆಂಗಳೂರು)- 596
2) ದಿನ ಭತ್ಯೆ (ಇತರೆ ಸ್ಥಳ)- 469
3) ಸ್ಥಳೀಯ ಭತ್ಯೆ( ಬೆಂಗಳೂರು)- 234
4) ಸ್ಥಳೀಯ ಭತ್ಯೆ( ಇತರೆ ಸ್ಥಳಗಳು)- 189
5) ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ-4515
6) ಕ್ಯಾಂಪ್ ಸಹಾಯಕರು- 1260
7) ಡಿ ದರ್ಜೆ ಸಿಬ್ಬಂದಿ- 630

ಗಣಿತ-ವಿಜ್ಞಾನ ಶಿಕ್ಷಕರು ಗೈರು ಹಾಜರಾತಿ:ಸಾಮಾನ್ಯವಾಗಿ ಪ್ರತಿವರ್ಷ ಗಣಿತ ಹಾಗೂ ವಿಜ್ಞಾನ ವಿಷಯಕ್ಕೆ ಮೌಲ್ಯಮಾಪನ ಕಾರ್ಯದಲ್ಲಿ ಶಿಕ್ಷಕರು ಗೈರು ಹಾಜರಾಗುತ್ತಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ನಿರ್ದೇಶಕರು, ಮೌಲ್ಯಮಾಪನಕ್ಕೆ ಗೈರು ಹಾಜರಾಗುವುದು ಬಹಳ ಕಡಿಮೆ. ಕಾರಣ ಮೌಲ್ಯಮಾಪನವೂ ಒಂದು ವಾರದೊಳಗೆ ಮುಗಿದು ಹೋಗಲಿದೆ. ಆಕರ್ಷಣಿಯ ಸಂಭಾವನೆಯನ್ನು ಕೊಟ್ಟಿದ್ದು, ಮೌಲ್ಯಮಾಪನ ಎಂಬುದು ಹಬ್ಬದಂತೆ ಇರಲಿದೆ. ಏಕೆಂದರೆ ಎಲ್ಲ ಶಿಕ್ಷಕರು ಸೇರಲು, ವಿಷಯಗಳ ಕುರಿತು ಚರ್ಚೆ ನಡೆಸಲಿದೆ. ಗರಿಷ್ಠ ಪ್ರಮಾಣದ ಶಿಕ್ಷಕರು ಬರುವ ನಿರೀಕ್ಷೆ ಇದೆ. ವೈಯಕ್ತಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಇದ್ದರೆ ಅಂಥವರಿಗೆ ರಿಲೀಫ್ ನೀಡಲಾಗಿದೆ ಎಂದು ಹೇಳಿದರು

ಇದನ್ನೂ ಓದಿ:ನಮಗೆ ತೊಂದರೆ ಕೊಟ್ಟು ಕೋರ್ಟ್​ಗೆ ಅಲೆಸಬೇಕು ಅನ್ನೋದು ಬಿಜೆಪಿ ರಾಜಕಾರಣ: ಡಿಕೆಶಿ

ABOUT THE AUTHOR

...view details