ಬೆಂಗಳೂರು:ಇನ್ನು ಒಂದು ವಾರದೊಳಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ರಾಜ್ಯದ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಪರೀಕ್ಷೆಗೆ ಸಾಕಷ್ಟು ತಡವಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಒಂದು ವಾರದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ವಾರದೊಳಗೆ ಎಸ್ಎಸ್ಎಲ್‌ಸಿ ಪರೀಕ್ಷೆ ದಿನಾಂಕ ಪ್ರಕಟ: ಸಚಿವ ಸುರೇಶ್ ಕುಮಾರ್ ಸಾಕಷ್ಟು ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳಿಗೆ ರಜೆ ಕಾರಣಕ್ಕೆ ಹೋಗಿದ್ದಾರೆ. ಅವರನ್ನು ವಾಪಸ್ ಕರೆತಂದು ಪರೀಕ್ಷೆ ಬರೆಯುವಂತೆ ನೋಡಿಕೊಳ್ಳುವುದು ನಮ್ಮ ಮೊದಲ ಸವಾಲು. ಸಾಕಷ್ಟು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಇನ್ನು ಕೊರೊನಾ ಭೀತಿ ಇದೆ. ಅಂತಹ ಕಡೆಗಳಲ್ಲಿ ಪರೀಕ್ಷೆ ನಡೆಸುವುದು ಸಹ ದೊಡ್ಡ ಸವಾಲಾಗಿದೆ. ಜೊತೆಗೆ ಪಿಯುಸಿ ಇಂಗ್ಲಿಷ್ ಪರೀಕ್ಷೆ ಸಹ ಬಾಕಿ ಇದೆ ಎಂದು ವಿವರಿಸಿದರು.
ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳ ಶೈಕ್ಷಣಿಕ ವರ್ಷ ಯಾವ ತಿಂಗಳಿನಿಂದ ಆರಂಭಿಸಬೇಕು. ಹಾಗೂ ಸಿಲೆಬಸ್ ಕಡಿಮೆ ಮಾಡಬೇಕಾ ಎಂಬಿತ್ಯಾದಿ ವಿಷಯಗಳು ನಮ್ಮ ಮುಂದಿವೆ. ಈ ವಿಷಯದ ಬಗ್ಗೆ ಸಲಹೆ ಪಡೆಯಲು ನಾಡಿನ ಶಿಕ್ಷಣ ತಜ್ಞರು, ಸಾಹಿತಿಗಳು ಮತ್ತು ಶಿಕ್ಷಕರ ಕ್ಷೇತ್ರದ ಎಂಎಲ್ಸಿ ಗಳ ಜೊತೆ ಮಾತನಾಡಿ ಅವರ ಸಲಹೆ ಪಡೆದುಕೊಂಡಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.