ಬೆಂಗಳೂರು: ಬಿಜೆಪಿಯ ರೌಡಿಸಂ ರಾಜಕಾರಣಕ್ಕೆ ಧಿಕ್ಕಾರ ಎಂದು ಕಾಂಗ್ರೆಸ್ ಮುಖಂಡ ಎಸ್.ಆರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆರ್ಆರ್ ನಗರ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನಂ ನಾಯ್ಡು ಬೆಂಬಲಿಗರು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಭಾಷಣಕ್ಕೆ ಅಡ್ಡಿಪಡಿಸಿ ದಾಂಧಲೆ ನಡೆಸಿದ್ದಾರೆ. ಯಶವಂತಪುರ ಬಿ.ಕೆ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಸಿದ್ದರಾಮಯ್ಯರವರ ಭಾಷಣಕ್ಕೆ ಅಡ್ಡಿಪಡಿಸಿದಲ್ಲದೆ, ವಾಪಸ್ ಹೋಗುವಂತೆ ಗೂಂಡಾಗಿರಿ ನಡೆಸಿದ್ದಾರೆ ಎಂದು ದೂರಿದ್ದಾರೆ.
ಬಿಜೆಪಿ ಅಭ್ಯರ್ಥಿ ಮುನಿರತ್ನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಗೂಂಡಾಗಳನ್ನು ಕಳುಹಿಸಿ ಬೆದರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿಯ ಈ ಗೂಂಡಾಗಿರಿಗೆ ನಾವು ಹೆದರುವವರಲ್ಲ. ಇದಕ್ಕೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಚುನಾವಣಾ ಆಯೋಗ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಬಿಜೆಪಿ ಪಕ್ಷದ ಈ ಗೂಂಡಾಗಿರಿಗೆ ಕಡಿವಾಣ ಹಾಕುವ ಕೆಲಸವನ್ನು ಮಾಡಬೇಕಿದೆ. ಇಲ್ಲದಿದ್ದರೆ, ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಮುನಿರತ್ನ ನಾಯ್ಡು ಎಸ್ಆರ್ ಪಾಟೀಲ್ ಕುರಿತು ಟ್ವೀಟ್ ಮಾಡಿದ್ದು, ಚಿತ್ರರಂಗದಲ್ಲಿದ್ದ ಮುನಿರತ್ನ ನಾಯ್ಡು ನವರಸಗಳನ್ನು ಅರೆದು ಕುಡಿದಿದ್ದಾರೆ. ಹಾಗಾಗಿ ನಟನೆ ಅವರಿಗೆ ಹೊಸದಲ್ಲ. ಇಂದು ಕಣ್ಣೀರು ಹಾಕಿ 'ಕರುಣಾ' ರಸವನ್ನು ಹೊರ ಹಾಕಿ ನಟಿಸಿದ್ದಾರೆ. ಈಗಾಗಲೇ ಮುನಿರತ್ನರ 'ಭೀಭತ್ಸ', 'ರೌದ್ರ' ಮತ್ತು 'ಭಯಾನಕ' ರಸಗಳು ಕ್ಷೇತ್ರದಲ್ಲಿ ಪ್ರಯೋಗವಾಗಿದೆ. ಫಲಿತಾಂಶ ಬಂದ ನಂತರ 'ಶಾಂತ' ರಸ ಹೊರಬರಲಿದೆ ಎಂದಿದ್ದಾರೆ.