ಕರ್ನಾಟಕ

karnataka

ETV Bharat / state

ಶುಲ್ಕ ಪಾವತಿ ವಿಳಂಬ: ಹೈಕೋರ್ಟ್​ನ ಕ್ಷಮೆಯಾಚಿಸಿದ ಎಸ್.ಆರ್ ಹಿರೇಮಠ್ - PIL

ನ್ಯಾಯಾಲಯದ ಶುಲ್ಕ ಪಾವತಿಯಲ್ಲಿ ವಿಳಂಬ ಮತ್ತು ವಿಚಾರಣೆಗೆ ಸಹಕಾರದ ನೀಡದ ವಿಷಯಕ್ಕೆ ಸಂಬಂಧಪಟ್ಟಂತೆ ಎಸ್.ಆರ್ ಹಿರೇಮಠ್ ಹೈಕೋರ್ಟ್ ಮುಂದೆ ಕ್ಷಮೆ ಯಾಚಿಸಿದ್ದಾರೆ.

SR Hiremath apologized to the High Court
ಹೈಕೋರ್ಟ್​ನ ಕ್ಷಮೆಯಾಚಿಸಿದ ಎಸ್.ಆರ್ ಹಿರೇಮಠ್

By

Published : Aug 11, 2021, 7:00 AM IST

ಬೆಂಗಳೂರು:ರಾಜ್ಯ ಸರ್ಕಾರ 2013-14 ರಲ್ಲಿ ನಡೆಸಿದ ಸಹಾಯಕ ಸರ್ಕಾರಿ ಅಭಿಯೋಜಕರ (ಎಎಪಿ) ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ(PIL) ನ್ಯಾಯಾಲಯ ಶುಲ್ಕ ಪಾವತಿಸದೆ ಇರುವುದು ಮತ್ತು ವಿಚಾರಣೆಗೆ ಸಹಕಾರ ನೀಡಿದೆ ಇರುವ ಸಂಬಂಧ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಹೈಕೋರ್ಟ್​ನ ಕ್ಷಮೆ ಕೇಳಿದ್ದಾರೆ.

ಎಸ್.ಆರ್. ಹಿರೇಮಠ್ ಹಾಗೂ ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ಪಿಐಎಲ್​​ನಲ್ಲಿ 197 ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಎಸ್.ಆರ್. ಹಿರೇಮಠ್ ಪ್ರಮಾಣ ಪತ್ರ ಸಲ್ಲಿಸಿ ನ್ಯಾಯಾಲಯದ ಕ್ಷಮೆ ಯಾಚಿಸಿದರು.

ಆ. 1ರಂದು ಪತ್ರಿಕೆಗಳಲ್ಲಿ ಸುದ್ದಿ ನೋಡಿದಾಗಲೇ ಅರ್ಜಿ ಸಂಬಂಧ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಬಗ್ಗೆ ನನಗೆ ತಿಳಿಯಿತು. ಇದುವರೆಗೂ ನಾನು ಸಾಕಷ್ಟು ಪಿಐಎಲ್ ಸಲ್ಲಿಸಿದ್ದೇನೆ. ಯಾವ ಅರ್ಜಿಯಲ್ಲೂ ಕೋರ್ಟ್ ಶುಲ್ಕ 5ರಿಂದ 10 ಸಾವಿರ ರೂಪಾಯಿ ದಾಟುತ್ತಿರಲಿಲ್ಲ. ಸಣ್ಣ ಪುಟ್ಟ ದೇಣಿಗೆ ಸಂಗ್ರಹಿಸಿ ಅರ್ಜಿಗಳನ್ನು ನಡೆಸಿಕೊಂಡು ಹೋಗುತ್ತಿರುವೆ. ಇದೇ ಮೊದಲ ಬಾರಿಗೆ ಲಕ್ಷಾಂತರ ರೂ. ಕೋರ್ಟ್ ಶುಲ್ಕ ಪಾವತಿಸುವ ಪರಿಸ್ಥಿತಿ ನನಗೆ ಎದುರಾಗಿದೆ ಎಂದು ಎಸ್​. ಆರ್ ಹಿರೇಮಠ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನೀವು ಅರ್ಜಿಯಲ್ಲಿ 200ಕ್ಕೂ ಹೆಚ್ಚು ಪ್ರತಿವಾದಿಗಳನ್ನು ಮಾಡಿದ್ದೀರಿ. ಇಂತಹ ಸಂದರ್ಭದಲ್ಲಿ ಕೋರ್ಟ್ ಶುಲ್ಕ ಹೆಚ್ಚಿರುತ್ತದೆ ಎಂಬ ಬಗ್ಗೆ ನಿಮಗೆ ಗೊತ್ತಿರಲಿಲ್ಲವೇ? ಅರ್ಜಿ ದಾಖಲಿಸಿ ನಂತರ ವಿಚಾರಣೆಗೆ ಸೂಕ್ತ ಸಹಕಾರ ನೀಡದೆ ಹೋದರೆ ಹೇಗೆ? ಇದೇ ವರ್ತನೆ ಪುನರಾವರ್ತಿಸಿದರೆ ಭವಿಷ್ಯದಲ್ಲಿ ಪಿಐಎಲ್ ಸಲ್ಲಿಸಿದಂತೆ ನಿಮಗೆ ನಿರ್ಬಂಧ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

ಇದನ್ನೂಓದಿ : ಎಪಿಪಿ ನೇಮಕಾತಿ ಅಕ್ರಮ ಆರೋಪ : ಎಸ್.ಆರ್​​​ ಹಿರೇಮಠ್ ನಡೆ ಖಂಡಿಸಿದ ಹೈಕೋರ್ಟ್

ಅರ್ಜಿದಾರ ಹಿರೇಮಠ್ ಪ್ರತಿಕ್ರಿಯಿಸಿ, ನನಗೆ ಒಂದು ತಿಂಗಳು ಕಾಲಾವಕಾಶ ನೀಡಿದರೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕೋರ್ಟ್ ಶುಲ್ಕ ಪಾವತಿಸಲಾಗುವುದು. ಅರ್ಜಿ ವಿಚಾರಣೆಗೆ ಸೂಕ್ತ ಸಹಕಾರ ನೀಡಲಾಗುವುದು. ನಮ್ಮ ಪರ ವಾದ ಮಂಡಿಸಲು ಬೇರೆ ವಕೀಲರನ್ನು ನೇಮಿಸಿಕೊಂಡು ಅರ್ಜಿಯನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.

ಎರಡನೇ ಅರ್ಜಿದಾರರಾದ ಸುಧಾ ಕಾಟ್ವಾ ಅವರಿಗೆ ಆರ್ಥಿಕ ಸಮಸ್ಯೆಯಿದೆ. ಇಷ್ಟೊಂದು ಕೋರ್ಟ್ ಶುಲ್ಕ ಪಾವತಿಸಲು ಅವರಿಗೂ ಕಷ್ಟ. ಜೊತೆಗೆ ಪ್ರಕರಣದಿಂದ ನಾನು ಹಿಂದೆ ಸರಿಯಲು ತೀರ್ಮಾನಿಸಿದ್ದು, ಆ ಸಂಬಂಧ ಸಲ್ಲಿಸಿರುವ ಮೊಮೊವನ್ನು ಮಾನ್ಯ ಮಾಡಬೇಕು ಎಂದು ಹಿರೇಮಠ್ ಪರ ವಕೀಲ ಎಸ್. ಉಮಾಪತಿ ನ್ಯಾಯಾಲಯವನ್ನು ಕೋರಿದರು.

ಅರ್ಜಿದಾರರು ಬೇರೊಬ್ಬ ವಕೀಲರನ್ನು ನಿಯೋಜಿಸುವವರೆಗೂ ಯಾರನ್ನೂ ಅರ್ಜಿಯಿಂದ ಕೈ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಹಿರೇಮಠ್ ಅವರು ಸಲ್ಲಿಸಿರುವ ಪ್ರಮಾಣ ಪತ್ರವನ್ನು ದಾಖಲಿಸಿಕೊಂಡು ಕೋರ್ಟ್ ಶುಲ್ಕ ಪಾವತಿಸಲು ಒಂದು ತಿಂಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಸೆ. 13ಕ್ಕೆ ಮುಂದೂಡಿತು.

ಕೋರ್ಟ್ ಶುಲ್ಕ ಪಾವತಿಸದೆ ಇರುವುದು ಮತ್ತು ವಿಚಾರಣೆಗೆ ಸೂಕ್ತ ಸಹಕಾರ ನೀಡದೇ ಇರುವ ಬಗ್ಗೆ ಜು.30ರಂದು ಹಿರೇಮಠ್ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.

ಪಿಐಎಲ್ ಅರ್ಜಿ ಸಲ್ಲಿಸಿ ನಂತರ ಉಪೇಕ್ಷೆ ಮಾಡುವುದು, ಕೋರ್ಟ್ ವಿಚಾರಣೆಗೆ ಸ್ಪಂದಿಸದಿರುವುದು ನಿಜಕ್ಕೂ ಬೇಜವಾಬ್ದಾರಿತನದ ನಡೆಯಾಗಿದೆ. ನ್ಯಾಯಾಲಯ ಇಂತಹ ವರ್ತನೆ ಸಹಿಸುವುದಿಲ್ಲ. ಕಾನೂನು ರೀತಿ ಕ್ರಮ ಜರುಗಿಸಲು ಅರ್ಹ ಪ್ರಕರಣ ಇದಾಗಿದೆ. ಅರ್ಜಿದಾರರಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಿ ಮುಂದೆ ಪಿಐಎಲ್ ಸಲ್ಲಿಸದಂತೆ ನಿರ್ಬಂಧ ಹೇರಬಹುದಾಗಿದೆ ಎಂದು ಖಾರವಾಗಿ ನುಡಿದಿತ್ತು. ಈ ಕುರಿತು ವಿಚಾರಣೆಗೆ ಹಾಜರಾಗಿ ವಿವರಣೆ ನೀಡುವಂತೆ ಹಿರೇಮಠ್‌ಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು.

ABOUT THE AUTHOR

...view details