ಬೆಂಗಳೂರು: ಇಬ್ಬರು ಶಾಸಕರ ರಾಜೀನಾಮೆಯಿಂದ ಕಂಗಾಲಾಗಿರುವ ಕಾಂಗ್ರೆಸ್ ನಾಯಕರು ಉಳಿದ ಅತೃಪ್ತ ಶಾಸಕರ ಕಡೆ ವಿಶೇಷ ಗಮನ ಹರಿಸಿದ್ದು, ಅವರ ಚಲನವಲನಗಳ ಮೇಲೆ ನಿಗಾ ಇರಿಸಿ, ಮನವೊಲಿಕೆಗೆ ಶತ ಪ್ರಯತ್ನ ಮುಂದುವರಿಸಿದ್ದಾರೆ.
ಇನ್ನಷ್ಟು ಶಾಸಕರು ಕೈಕೊಡುವ ಆತಂಕ: ಅತೃಪ್ತರ ಮೇಲೆ ನಿಗಾ ಇಟ್ಟ ಕಾಂಗ್ರೆಸ್ ನಾಯಕರು - kannadanews
ಇಬ್ಬರು ಶಾಸಕರ ರಾಜೀನಾಮೆಯಿಂದ ಕಂಗಾಲಾಗಿರುವ ಕಾಂಗ್ರೆಸ್ ನಾಯಕರು ಉಳಿದ ಅತೃಪ್ತ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇರುವುದರಿಂದ ಅವರೆಡೆ ವಿಶೇಷ ಗಮನ ಹರಿಸಿದ್ದಾರೆ.
ಶಾಸಕರಾದ ಮಹೇಶ್ ಕುಮಟಳ್ಳಿ, ಬಿ.ಸಿ ಪಾಟೀಲ್, ಶ್ರೀಮಂತ ಪಾಟೀಲ್, ನಾಗೇಂದ್ರ ಸೇರಿದಂತೆ ಕೆಲ ಶಾಸಕರು ಇಂದು ಇಲ್ಲ ನಾಳೆ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಸಾಧ್ಯತೆ ಕಂಡು ಬಂದಿರುವ ಹಿನ್ನೆಲೆ ಇವರ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ರಮೇಶ್ ಹಾಗೂ ಆನಂದ್ ಸಿಂಗ್ ಇಬ್ಬರು ರಾಜೀನಾಮೆ ನೀಡಿದ್ದು ಇವರೊಂದಿಗೆ ಗುಂಪಾಗಿ ಇನ್ನಷ್ಟು ಮಂದಿ ರಾಜೀನಾಮೆ ನೀಡಬಹುದಾದ ಆತಂಕ ಎದುರಾಗಿದೆ. ಅತೃಪ್ತ ಶಾಸಕರು ಯಾರು ಇದುವರೆಗೂ ತಾವು ರಾಜೀನಾಮೆ ನೀಡುವುದಾಗಿ ತಿಳಿಸಿಲ್ಲ, ಬದಲಾಗಿ ತಾವು ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದಾಗಿ ಹೇಳಿಕೊಂಡಿದ್ದಾರೆ. ಆದರೂ ಇವರು ಕೈಕೊಡುವ ಆತಂಕ ಇರುವ ಹಿನ್ನೆಲೆ ಕಾಂಗ್ರೆಸ್ ಪಕ್ಷ ಇವರ ಮೇಲೆ ಹೆಚ್ಚಿನ ಗಮನ ಹರಿಸಿದೆ. ನಿರಂತರ ಸಂಪರ್ಕದಲ್ಲಿದ್ದು ಮನವೊಲಿಸುವ ಯತ್ನವನ್ನು ನಡೆಸಿದೆ.
ಒಟ್ಟು ಆರು ವರ್ಷ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಹಿರಿಯ ಸಚಿವರಿಂದ ರಾಜೀನಾಮೆ ಪಡೆದು ಅತೃಪ್ತ ಶಾಸಕರಿಗೆ ಅವಕಾಶ ನೀಡುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿರುವ ಆತಂಕವನ್ನು ನಿವಾರಿಸಿಕೊಳ್ಳುವ ಚಿಂತನೆಯನ್ನು ಕೂಡ ನಡೆಸಲಾಗಿದೆ. ಈ ಹಿನ್ನೆಲೆ ಸಚಿವರಾದ ಕೆಜೆ ಜಾರ್ಜ್, ಆರ್ ವಿ ದೇಶಪಾಂಡೆ, ಡಿಕೆ ಶಿವಕುಮಾರ್, ಕೃಷ್ಣ ಬೈರೇಗೌಡ, ಯು ಟಿ ಖಾದರ್ ಅವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಪರ್ಯಾಯವಾಗಿ ಈ ಹಿರಿಯ ಸಚಿವರಿಗೆ ಪಕ್ಷ ಸಂಘಟನೆ ಹಾಗೂ ಸರ್ಕಾರದ ಭಾಗವಾಗಿ ಇತರೆ ಗೌರವಯುತ ಸ್ಥಾನವನ್ನು ನೀಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಇವೆಲ್ಲವುಗಳ ಮಧ್ಯೆ ಸಮ್ಮಿಶ್ರ ಸರ್ಕಾರವನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈ ಸಾರಿಯೂ ಬಿಜೆಪಿಗೆ ಸರ್ಕಾರ ರಚಿಸುವ ಕನಸನ್ನು ಈಡೇರಿಸಿಕೊಳ್ಳಲು ಆಗದಂತೆ ತಡೆಯುವ ಯತ್ನ ನಡೆಸಿದ್ದಾರೆ.