ಬೆಂಗಳೂರು: 2023 ಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಸಂಕಲ್ಪ ತೊಟ್ಟಿರುವ ಜೆಡಿಎಸ್ ರಾಜ್ಯಾದ್ಯಂತ ತನ್ನ ನೆಲೆ ಭದ್ರಪಡಿಸಿಕೊಳ್ಳಲು ಕಾರ್ಯತಂತ್ರ ಹೆಣೆಯುತ್ತಿದೆ. ರಾಜ್ಯದ ಯಾವ, ಯಾವ ಭಾಗದಲ್ಲಿ ಪಕ್ಷ ಬಲಹೀನವಾಗಿದೆಯೋ ಅಲ್ಲೆಲ್ಲ ಹೊಸ ಚೈತನ್ಯ ತುಂಬಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಜೆಡಿಎಸ್, ವಿಶೇಷವಾಗಿ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದೆ.
ಕನ್ನಡ ರಾಜ್ಯೋತ್ಸವ ದಿನದಂದು (ನ.1) ಆರಂಭವಾಗುವ ಪಂಚರತ್ನ ಯಾತ್ರೆಯಲ್ಲಿ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಲು ಭೂಮಿಕೆ ಸಿದ್ಧಪಡಿಸಲಾಗುತ್ತಿದೆ. ಕಿತ್ತೂರು ಕರ್ನಾಟಕದಲ್ಲಿ ಹಿರಿಯ ನಾಯಕ ಬಸವರಾಜ ಹೊರಟ್ಟಿ, ಕೋನರೆಡ್ಡಿ ಪಕ್ಷ ಬಿಟ್ಟು ಹೋದ ಮೇಲೆ ಪಕ್ಷಕ್ಕೆ ನೆಲೆಯೇ ಇಲ್ಲದಂತಾಗಿದೆ. ಹಾಗಾಗಿ ಈ ಭಾಗದಲ್ಲಿ ಯುವಕರನ್ನು ಗುರುತಿಸಿ 2023ರ ಚುನಾವಣೆಯಲ್ಲಿ ಕಣಕ್ಕಿಳಿಸುವ ಕಾರ್ಯತಂತ್ರದ ವೇದಿಕೆ ಸಜ್ಜುಗೊಳಿಸಲಾಗಿದೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದಲ್ಲೂ ಪಕ್ಷಕ್ಕೆ ಪುನಶ್ವೇತನ ನೀಡಬೇಕೆಂಬುದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ದೃಢ ಸಂಕಲ್ಪ. ಹೀಗಾಗಿ, ತಳ ಮಟ್ಟದ ಪಕ್ಷ ನಿಷ್ಠೆಯ ಕಾರ್ಯಕರ್ತರನ್ನು ಅಣಿಗೊಳಿಸಲು ಮುಂದಾಗಿದ್ದಾರೆ.
ಪಕ್ಷ ಸಂಘಟನೆ:ಕಲಬುರಗಿ, ಹುಮನಾಬಾದ್, ಬಸವಕಲ್ಯಾಣ, ಸೇಡಂ, ಅಫಜಲ್‌ಪುರ, ಚಿಂಚೋಳಿ, ರಾಯಚೂರು, ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಅನೇಕ ಕ್ಷೇತ್ರಗಳನ್ನು ಗುರುತಿಸಿ ಅಲ್ಲೆಲ್ಲ ಪಕ್ಷ ಸಂಘಟನೆಗೆ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಇನ್ನು ಕಿತ್ತೂರು ಕರ್ನಾಟಕ ಭಾಗದಲ್ಲಿ ಬಿಜೆಪಿ, ಕಾಂಗ್ರೆಸ್ನಿಂದ ಎರಡನೇ ಹಂತದ ನಾಯಕರನ್ನು ಸೆಳೆಯುವ ರಾಜಕೀಯ ಚಾಣಾಕ್ಷತೆ ತೋರಲು ಜೆಡಿಎಸ್ ಕಾರ್ಯತಂತ್ರ ರೂಪಿಸುತ್ತಿದೆ. ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಏರಲು ಕೇವಲ ಹಳೆ ಮೈಸೂರು ಭಾಗದ ಗೆಲುವಿನಿಂದ ಸಾಧ್ಯವಿಲ್ಲ ಎಂಬ ಲೆಕ್ಕಾಚಾರಕ್ಕೆ ಬಂದಿರುವ ಜೆಡಿಎಸ್, ಈ ಬಾರಿ ಸಮಗ್ರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಬಲಪಡಿಸಿ ಆ ಮೂಲಕ ಚುನಾವಣೆ ಗೆಲ್ಲಲು ಎಲ್ಲ ಸಿದ್ಧತೆ ನಡೆಸಿದೆ.
ಪಂಚರತ್ನ ಯಾತ್ರೆ: ನವೆಂಬರ್ 1ರಿಂದ ಪಂಚರತ್ನ ಯಾತ್ರೆ ಆರಂಭಿಸಲಿರುವ ಜೆಡಿಎಸ್, ಅಂದಿನಿಂದಲೇ ಚುನಾವಣಾ ಪ್ರಚಾರವನ್ನು ಕೂಡ ಕೈಗೊಳ್ಳಲಿದೆ. ಸುಮಾರು ಒಂದು ವರ್ಷದಿಂದಲೂ ಚುನಾವಣೆ ತಯಾರಿಯಲ್ಲಿ ತೊಡಗಿರುವ ಜೆಡಿಎಸ್ ನಾಯಕರು ಮೊದಲ ಹಂತದ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುತ್ತಿದ್ದಾರೆ. ನ.1ರಿಂದ ಪಂಚರತ್ನ ಯಾತ್ರೆಯ ನೇತೃತ್ವವನ್ನು ಆಯಾ ಕ್ಷೇತ್ರಗಳಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳೇ ವಹಿಸಬೇಕಾಗುತ್ತದೆ.