ಬೆಂಗಳೂರು: ಇಂದು ನಡೆದ ವಿಧಾನಸಭೆ ಕಲಾಪದಲ್ಲಿ ಟಿಪ್ಪು ಜಯಂತಿಯನ್ನು ರದ್ದುಪಡಿಸಿದ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೆ ಸ್ಪೀಕರ್ ಮುಂದೂಡಿದ್ದಾರೆ.
ಸದನದಲ್ಲಿ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ರದ್ದುಪಡಿಸಿದ ನೂತನ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದನದಿಂದ ಹೊರ ನಡೆದರು. ಸಿದ್ಧರಾಮಯ್ಯ ಜೊತೆ ಕಾಂಗ್ರೆಸ್ ಸದಸ್ಯರೆಲ್ಲರೂ ಎದ್ದು ನಿಂತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ನಡೆಸಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ರದ್ದುಪಡಿಸಿದ ನೂತನ ಸರ್ಕಾರದ ಕ್ರಮವನ್ನು ಖಂಡಿಸಿದ್ರು.
ಈ ಬಗ್ಗೆ ಮಧ್ಯಪ್ರವೇಶಿಸಿ ಮಾತಾನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ವಿಷಯ ಪ್ರಸ್ತಾಪವಾಗುತ್ತಿದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಹಾಗೆಯೇ ಇದನ್ನು ಪ್ರಸ್ತಾಪ ಮಾಡುವ ಕುರಿತು ನನ್ನ ಗಮನಕ್ಕೂ ನೀವು ತಂದಿಲ್ಲ. ಸಭೆಯ ನಿಯಮಾವಳಿಗಳ ಪ್ರಕಾರ ನೀವು ಈ ವಿಷಯದ ಕುರಿತು ಮಾತನಾಡುವುದಿದ್ದರೆ ನನ್ನ ಗಮನಕ್ಕೆ ತರಬೇಕಿತ್ತು. ಆದರೆ ನೀವು ತಂದಿಲ್ಲ. ಅದೇ ರೀತಿ ವಿಷಯ ಗೊತ್ತಿಲ್ಲದೆ ಇರುವುದರಿಂದ ಸರ್ಕಾರದ ಪರಿವಾಗಿಯೂ ಯಾರು ಉತ್ತರಿಸಲು ಸಾಧ್ಯವಿಲ್ಲ ಎಂದರು.