ಬೆಂಗಳೂರು :ಸಚಿವರೇ ನಿಮ್ಮ ಸಮಸ್ಯೆಯನ್ನು ಹೇಳೋದಲ್ಲ, ಸರ್ಕಾರದ ಉತ್ತರವನ್ನು ಹೇಳಿ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರಿಗೆ ನಿರ್ದೇಶನ ನೀಡಿದ ಘಟನೆ ವಿಧಾನ ಪರಿಷತ್ನಲ್ಲಿ ನಡೆಯಿತು.
ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಸುನೀಲ್ ಸುಬ್ರಮಣಿ ಅವರು ಮಡಿಕೇರಿಯಲ್ಲಿ ಉತ್ಪತ್ತಿಯಾಗುವ ಮಲಿನ ಒಳಚರಂಡಿ ನೀರನ್ನು ಯಾವ ರೀತಿ ಸಂಸ್ಕರಿಸಲಾಗುತ್ತದೆ ಮತ್ತು ಎಲ್ಲಿಗೆ ಹರಿಸಲಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಬೈರತಿ ಬಸವರಾಜ್, ಕೊಡಗಿನಲ್ಲಿ ಮಲಿನ ನೀರು ಶುದ್ದೀಕರಣದ ಬೇಡಿಕೆಯಿದೆ. ಇದಕ್ಕೆ ಜಾಗದ ಕೊರತೆ ಇದೆ. ಜಿಲ್ಲಾಧಿಕಾರಿಗಳಿಗೆ 4.5 ಎಕರೆ ಜಾಗ ಬೇಕು ಎಂದು ಕೇಳಿದ್ದೇವೆ. ಆದರೆ, ಅಗತ್ಯ ಜಾಗ ಸಿಕ್ಕಿಲ್ಲ ಎಂದರು.
ಅಗತ್ಯ ಅನುದಾನ ಸಿದ್ದವಿದೆ. ಈಗಾಗಲೇ 27 ಕೋಟಿ ವೆಚ್ಚ ಮಾಡಲಾಗಿದೆ. 22 ಕೋಟಿ ಇನ್ನು ಇದೆ, ಮಲಿನ ನೀರು ಶುದ್ದೀಕರಿಸಿ ಬೇರೆ ಬೇರೆ ಕಡೆ ಸರಬರಾಜು ಮಾಡಲು ಸಿದ್ದವಿದ್ದೇವೆ. ಜಾಗ ಸಿಕ್ಕ ನಂತರ ಅನುಷ್ಟಾನಕ್ಕೆ ತರಲಾಗುತ್ತದೆ ಎಂದರು. ಸಚಿವರ ಈ ಹೇಳಿಕೆಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವರೇ ನಿಮ್ಮ ಸಮಸ್ಯೆ ಹೇಳೋದಲ್ಲ, ಸರ್ಕಾರದ ಪರ ಉತ್ತರ ಹೇಳಬೇಕು. ಡಿಸಿ ಸ್ಪಂದನೆ ಮಾಡುತ್ತಿಲ್ಲ ಅಂದರೆ ಹೇಗೆ? ಸದಸ್ಯರು ಸಮಸ್ಯೆ ಹೇಳಿಕೊಳ್ತಾರೆ. ಅವರಿಗೆ ಉತ್ತರ ಹೇಳಬೇಕಾದ ನೀವೂ ಸಮಸ್ಯೆ ಹೇಳಿದ್ರೆ ಹೇಗೆ? ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಜಂಟಿ ಅಧಿವೇಶನ ಮುಗಿದ ನಂತರ ಕೊಡಗಿಗೆ ಹೋಗಿ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆ :ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆದಷ್ಟು ಬೇಗ ಅಗ್ನಿಶಾಮಕ ಠಾಣೆ ಸ್ಥಾಪನೆ ಮಾಡುವುದಾಗಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸದನಕ್ಕೆ ಭರವಸೆ ನೀಡಿದರು. ಹಾರೋಹಳ್ಳಿ ಕೈಗಾರಿಕಾ ವಲಯದಲ್ಲಿ ಅಗ್ನಿ ಶಾಮಕ ಠಾಣೆ ಇಲ್ಲದೆ ಸಮಸ್ಯೆಯಾಗುತ್ತಿದೆ.