ಬೆಂಗಳೂರು: ಅಸಭ್ಯ ವರ್ತನೆ ಹಿನ್ನೆಲೆ ವಿಧಾನಸಭೆ ಅಧಿವೇಶನದಿಂದ 10 ಬಿಜೆಪಿ ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಯು.ಟಿ.ಖಾದರ್ ಆದೇಶಿಸಿದ್ದಾರೆ. ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ್, ಸುನಿಲ್ ಕುಮಾರ್, ಯಶಪಾಲ್ ಸುವರ್ಣ, ಆರ್.ಅಶೋಕ್, ಉಮನಾತ್ ಕೋಟ್ಯಾನ್, ಅರವಿಂದ ಬೆಲ್ಲದ್, ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಧೀರಜ್ ಮುನಿರಾಜು, ಆರಗ ಜ್ಞಾನೇಂದ್ರ ಅವರನ್ನು ಅಮಾನತು ಮಾಡಿ ಆದೇಶಿಸಿದರು. ವಿಧಾನಸಭೆ ಪೀಠಕ್ಕೆ ವಿಧೇಯಕ ಪ್ರತಿ ಹರಿದು ಬಿಸಾಕಿ ಅಗೌರವ ತೋರಿದ ಹಿನ್ನೆಲೆ 10 ಬಿಜೆಪಿ ಶಾಸಕರನ್ನು ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ.
ಪ್ರತಿಪಕ್ಷಗಳ ಒಕ್ಕೂಟದ ಸಭೆ ಹಿನ್ನೆಲೆಯಲ್ಲಿ ಗಣ್ಯರನ್ನು ಸ್ವಾಗತಿಸಲು ಹಾಗೂ ಶಿಷ್ಟಾಚಾರ ಪಾಲನೆಗೆ ಐಎಎಸ್ ಅಧಿಕಾರಿಗಳ ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ ಬಿಜೆಪಿ ಸದಸ್ಯರು ಇಂದು ಸದನದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವಿಚಾರ ಭೋಜನ ವಿರಾಮದ ಬಳಿಕವೂ ಮುಂದುವರೆಯಿತು. ಕಲಾಪ ಆರಂಭವಾಗುತ್ತಿದ್ದ ಹಾಗೇ ಬಿಜೆಪಿ ಸದಸ್ಯರು ತಮ್ಮ ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಸ್ಪೀಕರ್ ಮಾತನಾಡುತ್ತಾ, ತಮ್ಮ ಅಸ್ತಿತ್ವ ಉಳಿಸಲು ಕಲಾಪದ ಸಮಯ ವ್ಯರ್ಥ ಮಾಡುವುದು ಶೋಭೆ ತರುವ ಕೆಲಸ ಅಲ್ಲ. ಹಾಗಾಗಿ ನಿಮ್ಮ ಆಸನಕ್ಕೆ ತೆರಳಿ. ನಿಮ್ಮ ವರ್ತನೆಯನ್ನು ರಾಜ್ಯ ಸಹಿಸಲ್ಲ. ನೀವು ಅಶಿಸ್ತಿನಿಂದ ವರ್ತನೆ ಮಾಡಿದ್ದೀರಿ. ಪ್ರಜಾಪ್ರಭುತ್ವ ದಲ್ಲಿ ಸಭಾಧ್ಯಕ್ಷರ ಪೀಠಕ್ಕೆ ಧಕ್ಕೆ ತಂದರೆ, ಕಪ್ಪು ಚುಕ್ಕೆ ತಂದರೆ ಪೀಠ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಪೀಠಕ್ಕೆ ಅಗೌರವ ತಂದಿರುವುದಕ್ಕೆ ಕ್ರಮ ತೆಗದುಕೊಳ್ಳಬೇಕು. ಆಡಳಿತ ಪಕ್ಷದ ವಿಪ್ ಅಶೋಕ್ ಪಟ್ಟಣ್ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ದಮನಕಾರಿ ದ್ವೇಷದ ರಾಜಕಾರಣ ಮಾಡುತ್ತಿದೆ. ಅದರಲ್ಲಿ ನಿಮ್ಮ ಸ್ಥಾನ ದುರುಪಯೋಗ ಮಾಡಲಾಗುತ್ತಿದೆ. ಸ್ಪೀಕರ್ ಅವರು ಸರ್ಕಾರದ ಕೈ ಗೊಂಬೆ ಆಗಿದ್ದೀರಿ. ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದೀರಿ. ಸ್ಪೀಕರ್ ಸ್ಥಾನದ ಮಾನ ಮರ್ಯಾದೆ ತೆಗೆಯುತ್ತಿದ್ದೀರಿ. ರಾಜಕೀಯ ಬೇಳೆ ಬೇಯಿಸಲು ಅವರನ್ನು ದುರುಪಯೋಗ ಮಾಡಿದ್ದೀರಿ. ನೀವು ನಮ್ಮರಕ್ಷಣೆ ಮಾಡಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು.