ಬೆಂಗಳೂರು :ವಿಧಾನಸಭೆಯ ಸದಸ್ಯರನ್ನು ಶಾಸಕರೆಂದು ಸಂಭೋದಿಸುವ ರೀತಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರನ್ನು ಸಹ ಶಾಸಕರೆಂದು ಸಂಭೋದಿಸುವುದು ಮತ್ತು ಸರ್ಕಾರದ ಆಮಂತ್ರಣ ಪತ್ರಿಕೆಗಳಲ್ಲಿ ಇದೇ ರೀತಿ ಉಲ್ಲೇಖಿಸಿ ಶಿಷ್ಟಾಚಾರ ನಿಯಮವನ್ನು ಪಾಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಪತ್ರದಲ್ಲಿ, ಕರ್ನಾಟಕ ರಾಜ್ಯದ ವಿಧಾನ ಮಂಡಲದಲ್ಲಿ ವಿಧಾನ ಪರಿಷತ್ತು ಹಾಗೂ ವಿಧಾನಸಭೆ ಎಂದು ಎರಡು ಪ್ರತ್ಯೇಕ ಶಾಸನ ಸಭೆಗಳಿವೆ. ಚಿಂತಕರ ಚಾವಡಿ, ಪ್ರಾಜ್ಞರ ಮನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಧಾನ ಮಂಡಲದ ಮೇಲ್ಮನೆಯಾಗಿರುವ ವಿಧಾನ ಪರಿಷತ್ತಿನಲ್ಲಿ 75 ಜನ ಸದಸ್ಯರಿದ್ದಾರೆ. ಪದವೀಧರರು, ಶಿಕ್ಷಕರು, ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು, ವಿಧಾನ ಸಭೆಯಿಂದ ನಾಮ ನಿರ್ದೇಶಿತರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರುಗಳು ಸದರಿ ವಿಧಾನ ಪರಿಷತ್ತಿನ ಸದಸ್ಯರಾಗಿರುತ್ತಾರೆ.
ವಿಧಾನಸಭೆಯಲ್ಲಿನ 224 ಸದಸ್ಯರು ಜನರಿಂದ ಚುನಾಯಿತಗೊಂಡವರಾಗಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರಿಗೆ ಅಧಿಕಾರ, ವೇತನ ಸೇರಿದಂತೆ ಎಲ್ಲಾ ಸೌಲಭ್ಯಗಳು ಏಕರೂಪವಾಗಿರುತ್ತವೆ. ಜೊತೆಗೆ ಎರಡು ಮನೆಯ ಸದಸ್ಯರಿಗೂ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ವಾರ್ಷಿಕ ನಿಧಿಯನ್ನು ಸಮಾನವಾಗಿ ನೀಡಲಾಗುತ್ತಿದೆ. ಆದರೆ ವಿಷಾದದ ಸಂಗತಿ ಎಂದರೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಅಧಿಕಾರಿ ವರ್ಗದವರು ತಾರತಮ್ಯದಿಂದ ಕಾಣುತ್ತಿರುವುದು ಗಮನಕ್ಕೆ ಬಂದಿದೆ ಎಂದು ವಿವರಿಸಿದ್ದಾರೆ.