ಕರ್ನಾಟಕ

karnataka

ETV Bharat / state

ವನ್ಯಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಆರೋಪ: ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಇತರರ ವಿರುದ್ಧದ ಪ್ರಕರಣ ರದ್ದು - ಸಿಸಿಬಿ ಪೊಲೀಸರು

ವನ್ಯಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಇತರರ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

High Court
ವನ್ಯಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಆರೋಪ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಇತರರ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

By ETV Bharat Karnataka Team

Published : Oct 19, 2023, 6:50 AM IST

Updated : Oct 19, 2023, 8:10 AM IST

ಬೆಂಗಳೂರು:ತೋಟದ ಮನೆಯಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಪೋಷಣೆ ಮಾಡುತ್ತಿದ್ದ ಆರೋಪದಲ್ಲಿ ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರ ವಿರುದ್ಧ ವನ್ಯಜೀವಿ ಸಂಕ್ಷಣೆ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ.

ಎಸ್ ಎಸ್ ಮಲ್ಲಿಕಾರ್ಜುನ ಸಹೋದರ ಎಸ್ ಎಸ್ ಗಣೇಶ್ ಮತ್ತು ಸಂಪಣ್ಣ ಮುತಾಲಿಕ್ ಹಾಗೂ ಜಿ ಎಂ ಕರಿಬಸಪ್ಪ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಪ್ರಕರಣ ದಾಖಲಿಸುವಲ್ಲಿ ವನ್ಯಜೀವಿ ಅಪರಾಧ ಕಾಯಿದೆಯ ನಿಯಮಗಳನ್ನು ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಜೊತೆಗೆ ಅರಣ್ಯಾಧಿಕಾರಿಗಳ ದೂರಿನ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಾಗ್ನಿಜೆನ್ಸ್ ಪಡೆದು ತನಿಖೆಗೆ ಆದೇಶಿಸುವಲ್ಲಿ ಲೋಪವೆಸಗಿದೆ. ಪ್ರಕರಣ ಸಂಬಂಧ ದಾವಣಗೆರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರ್ಜಿದಾರರ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡಿರುವುದು ಗೊಂದಲಮಯವಾಗಿದೆ ಎಂದು ಪೀಠ ತಿಳಿಸಿದೆ.

ಜೊತೆಗೆ, ಇಡೀ ಪ್ರಕ್ರಿಯೆಯನ್ನು ತನಿಖಾಧಿಕಾರಿಗಳು ತಲೆಕೆಳಕಾಗಿ ಮಾಡಿದ್ದಾರೆ. ಪ್ರಕರಣದಲ್ಲಿ ಸರಿಪಡಿಸಲಾಗದಷ್ಟು ದೋಷಗಳು ಕಂಡುಬಂದಿವೆ. ಹೀಗಾಗಿ ಪ್ರಕರಣದ ವಿಚಾರಣೆಗೆ ಅನುಮತಿ ನೀಡಿದಲ್ಲಿ ಕಾನೂನಿನ ಪ್ರಕ್ರಿಯೆ ದುರುಪಯೋಗ ಪಡಿಸಿದಂತಾಗಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ ಏನು?:2022ರ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಸೆಂಥಿಲ್ ಎಂಬುವರಿಂದ ಸಿಸಿಬಿ ಪೊಲೀಸರು ಜಿಂಕೆ ಚರ್ಮವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ತನಿಖೆ ಮುಂದುವರೆಸಿದ್ದ ಪೊಲೀಸರು ಅರೋಪಿ ಸೇಂಥಿಲ್ ಅವರು ಜಿಂಕೆ ಚರ್ಮವನ್ನು ತಂದ ಸ್ಥಳವನ್ನು ಶೋಧನೆ ನಡೆಸಿದಾಗ ಮಲ್ಲಿಕಾರ್ಜುನ್ ತೋಟದ ಮನೆಯನ್ನು ಪರಿಶೀಲಿಸಿ 10 ಕೃಷ್ಣ ಮೃಗಗಳು, ಏಳು ಚುಕ್ಕೆ ಜಿಂಕೆಗಳು, ಏಳು ಕಾಡು ಹಂದಿಗಳು, ಮೂರು ಮುಂಗಸಿಗಳು ಹಾಗೂ ಎರಡು ನರಿಗಳನ್ನು ರಕ್ಷಣೆ ಮಾಡಿದ್ದರು.

ದಾವಣಗೆರೆಯ ತನ್ನ ತೋಟದ ಮನೆಯಲ್ಲಿ ಕೃಷ್ಣ ಮೃಗ, ಚುಕ್ಕೆ ಜಿಂಕೆ, ಸೇರಿದಂತೆ ಕಾಡು ಪ್ರಾಣಿಗ ಸಾಕುವ ಮೂಲಕ ವನ್ಯಜೀವ ಸಂರಕ್ಷಣಾ ಕಾಯಿದೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಅಷ್ಟೇ ಅಲ್ಲದೆ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.

ಇದನ್ನೂ ಓದಿ:ಮಂಗಳೂರು: ಪಾದಚಾರಿಗಳಿಗೆ ಕಾರು ಡಿಕ್ಕಿ; ಯುವತಿ ಸಾವು, ನಾಲ್ವರಿಗೆ ಗಾಯ- ಭಯಾನಕ ವಿಡಿಯೋ!

Last Updated : Oct 19, 2023, 8:10 AM IST

ABOUT THE AUTHOR

...view details