ಬೆಂಗಳೂರು:ಇಂದು ಮುಂಜಾನೆ ವಿಧಿವಶರಾದ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟ್ಯಾಲಿನ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಪಡೆದಿದ್ದಾರೆ. ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳ ಕಾಂಗ್ರೆಸ್ ನಾಯಕರು ಅಂತಿಮ ದರ್ಶನ ಪಡೆದರು.
ಪಕ್ಷದ ಹಿರಿಯ ನಾಯಕನ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ "ಉಮ್ಮನ್ ಚಾಂಡಿ ಒಬ್ಬ ಮುತ್ಸದ್ಧ ರಾಜಕಾರಣಿ, ದೇಶದ ರಾಜಕಾರಣಕ್ಕೆ ಅವರ ಸೇವೆ ಅಪಾರ. ಒಂದೇ ಕ್ಷೇತ್ರದಿಂದ ಹನ್ನೆರಡು ಬಾರಿ ಗೆದ್ದು, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಕೇರಳದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಅವರೊಬ್ಬ ಜನಪ್ರಿಯ ನಾಯಕರಾಗಿದ್ದರು. ಬಂಡೀಪುರ ಮತ್ತು ಗುಂಡ್ಲುಪೇಟೆ ಅರಣ್ಯದ ವಿಚಾರವಾಗಿ ಕರ್ನಾಟಕಕ್ಕೆ ಬಂದಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನ ನೀಡಲಿ" ಎಂದು ಸಂತಾಪ ಸೂಚಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್ 'ಐವತ್ತು ವರ್ಷ ಸುದೀರ್ಘ ರಾಜಕಾರಣ ಮಾಡಿದವರು ಉಮ್ಮನ್ ಚಾಂಡಿ. ಕೇರಳದಲ್ಲಿ ಅಷ್ಟೇ ಅಲ್ಲದೇ ನಮ್ಮ ರಾಜ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು, ನಮಗೂ ಮಾರ್ಗದರ್ಶಕರು ಆಗಿದ್ದವರು. ಅತ್ಯಂತ ಜನಪ್ರಿಯ ರಾಜಕಾರಣಿ, ಒಂದೇ ಕ್ಷೇತ್ರದಲ್ಲಿ ಹನ್ನೆರಡು ಬಾರಿ ಗೆದ್ದಿದ್ದಾರೆ. ನಾನು ಕೇರಳದಲ್ಲಿ ಹೋಗಿ ಚುನಾವಣಾ ಪ್ರಚಾರ ಮಾಡಿದಾಗ ಅವರ ಮಾನವೀಯತೆ ಗುಣಗಳನ್ನ ನೋಡಿದ್ದೇನೆ. ಅಂತಹ ವ್ಯಕ್ತಿ ಮತ್ತೊಬ್ಬರು ಇಲ್ಲ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ ಎಂದರು.