ಬೆಂಗಳೂರು: ತಾಯಿ ಮೃತಪಟ್ಟಿದ್ದಾಳೆ ಎಂಬುದನ್ನು ಅರಿಯದ 11 ವರ್ಷದ ಬಾಲಕ ಮೃತದೇಹದೊಂದಿಗೆ ಎರಡು ದಿನ ಕಳೆದಿರುವ ಘಟನೆ ನಗರದಲ್ಲಿ ನಡೆದಿದೆ. ಅಣ್ಣಮ್ಮ(40) ಎಂಬವರು ಮಲಗಿರುವಾಗಲೇ ಸಾವನ್ನಪ್ಪಿದ್ದರು. ಇದನ್ನರಿಯದ ಮಗ ತನ್ನ ತಾಯಿ ಮಲಗಿದ್ದಾರೆ ಎಂದೇ ಭಾವಿಸಿ ಮನೆಯಂಗಳದಲ್ಲಿ ಆಟವಾಡಿಕೊಂಡು ಎರಡು ದಿನ ಕಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನಕಲಕುವ ಸ್ಟೋರಿ: ಗಂಗಾ ನಗರದಲ್ಲಿ ವಾಸವಿದ್ದ ಅಣ್ಣಮ್ಮ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಫೆ.25 ರಂದು ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ತಾಯಿ ಸಾವನ್ನಪ್ಪಿರುವ ಬಗ್ಗೆ ಬಾಲಕನಿಗೆ ಕಿಂಚಿತ್ತೂ ಗೊತ್ತಾಗಲಿಲ್ಲ. ಹೀಗಾಗಿ, ಎರಡು ದಿನ ಮೃತದೇಹದ ಜತೆಗೇ ಸಮಯ ಕಳೆದಿದ್ದಾನೆ. ಅಕ್ಕಪಕ್ಕದ ಮನೆಯವರ ಬಳಿ ಹೋಗಿ ಅಮ್ಮ ಅಡುಗೆ ಮಾಡಿಲ್ಲ ಅಂತಾ ಊಟ ಮಾಡಿಕೊಂಡು ಬಂದು ಮತ್ತೆ ಅಮ್ಮನ ಮೃತದೇಹದ ಪಕ್ಕದಲ್ಲೇ ಮಲಗಿಕೊಳ್ಳುತ್ತಿದ್ದನಂತೆ.
ಫೆ.28 ರಂದು ಮೃತದೇಹದಿಂದ ದುರ್ವಾಸನೆ ಹೊರಬರಲು ಶುರುವಾಗಿದೆ. ಈ ಬಗ್ಗೆ ಬಾಲಕ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾನೆ. ಪರಿಶೀಲಿಸಿದಾಗ ಮಹಿಳೆ ಸಾವನ್ನಪ್ಪಿರುವುದು ಗೊತ್ತಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಆರ್.ಟಿ.ನಗರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಂಧ್ರದಲ್ಲೂ ನಡೆದಿತ್ತು ಇಂಥದ್ದೇ ಘಟನೆ: ಹತ್ತು ವರ್ಷದ ಬಾಲಕನೋರ್ವ ತನ್ನ ತಾಯಿ ನಿದ್ರಿಸುತ್ತಿದ್ದಾಳೆಂದು ಭಾವಿಸಿ ಮೃತದೇಹದೊಂದಿಗೆ ನಾಲ್ಕು ದಿನ ಕಳೆದಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯ ತಿರುಪತಿ ಸಮೀಪದ ವಿದ್ಯಾನಗರದಲ್ಲಿ ಇತ್ತೀಚೆಗೆ ವರದಿಯಾಗಿತ್ತು. ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದ ರಾಜ್ಯಲಕ್ಷ್ಮಿ ಎಂಬುವರು ಮೃತಪಟ್ಟಿದ್ದರು. ಎರಡು ವರ್ಷಗಳ ಹಿಂದೆ ಪತಿಯೊಂದಿಗೆ ಜಗಳವಾಗಿ ತಿರುಪತಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಆಕೆಯೊಂದಿಗೆ ಪುತ್ರ ಶ್ಯಾಮ್ ಕಿಶೋರ್ ಕೂಡ ಇದ್ದು, 5ನೇ ತರಗತಿಯಲ್ಲಿ ಓದುತ್ತಿದ್ದ. ಇದೇ ತಿಂಗಳ 8ರಂದು ರಾಜ್ಯಲಕ್ಷ್ಮಿ ಹಾಸಿಗೆಯಿಂದ ಬಿದ್ದು ಸಾವನ್ನಪ್ಪಿದ್ದರು. ಆದರೆ ಆಕೆ ನಿದ್ರಿಸುತ್ತಿದ್ದಾಳೆ ಎಂದುಕೊಂಡಿದ್ದ ಪುತ್ರ ನಾಲ್ಕು ದಿನಗಳ ಕಾಲ ಮೃತದೇಹದ ಜೊತೆಯಲ್ಲಿಯೇ ಇದ್ದ. ಶಾಲೆಯಿಂದ ಬಂದ ನಂತರ ಮನೆಯಲ್ಲಿಯಲ್ಲಿದ್ದ ತಿಂಡಿ ತಿಂದು, ಪಕ್ಕದಲ್ಲಿಯೇ ಮಲಗುತ್ತಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ತಾಯಿ ನಿದ್ರಿಸುತ್ತಿದ್ದಾಳೆ ಎಂದು ಭಾವಿಸಿ, ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಬಾಲಕ