ಬೆಂಗಳೂರು:ಬೆಳಕಿನ ಹಬ್ಬ ದೀಪಾವಳಿ ಆಚರಣೆ ಮಧ್ಯೆ ಈ ಸಾರಿ ಖಂಡಗ್ರಾಸ ಸೂರ್ಯಗ್ರಹಣ ಆಗಮಿಸಿದೆ. ಇಂದು ನರಕ ಚತುರ್ದಶಿ ಆಚರಣೆ ಮಾಡಿರುವ ಭಕ್ತರು ನಾಳೆ ಲಕ್ಷ್ಮೀಪೂಜೆ ನಡೆಸಬೇಕಿತ್ತು. ಆದರೆ ಸೂರ್ಯಗ್ರಹಣ ಹಿನ್ನೆಲೆ ನಾಳೆ ಯಾವುದೇ ಧಾರ್ಮಿಕ ಕಾರ್ಯಕ್ರಮ ನೆರವೇರುವುದಿಲ್ಲ.
ಅಶ್ವಯುಜ ಅಮಾವಾಸ್ಯೆಯಂದು ಸೂರ್ಯಗ್ರಹಣ ಆಗಮಿಸಿದ್ದು ಭಾರತ ಸಹಿತ ಏಷ್ಯಾ ಖಂಡದ ಮಧ್ಯ ಮತ್ತು ಪಶ್ಚಿಮದ ಪ್ರದೇಶ, ಸಂಪೂರ್ಣ ಯುರೋಪ್ ಖಂಡ, ಆಫ್ರಿಕಾ ಖಂಡದ ಪೂರ್ವೋತ್ತರ ಪ್ರದೇಶಗಳಲ್ಲಿ ಗ್ರಹಣ ಗೋಚರಿಸಲಿದೆ. ಭಾರತದಲ್ಲಿ ಸಂಜೆ 4.29ರಿಂದ ಆರಂಭವಾಗುವ ಗ್ರಹಣವು ಸೂರ್ಯಾಸ್ತದೊಂದಿಗೆ ಮುಕ್ತಾಯವಾಗಲಿದೆ. ಬೆಂಗಳೂರಿನಲ್ಲಿ ಸಂಜೆ 5.12ರಿಂದ 5.56ರವರೆಗೆ ಅಂದರೆ 44 ನಿಮಿಷಗಳ ಕಾಲ ಗ್ರಹಣ ಗೋಚರಿಸಲಿದೆ.
ಗ್ರಹಣ ಸಂದರ್ಭದಲ್ಲಿ ಜನರು ವೇದಕಾಲದಲ್ಲಿ ಸ್ನಾನ, ದೇವರ ಪೂಜೆ, ನಿತ್ಯಕರ್ಮಗಳು, ಜಪತಪಗಳು ಮತ್ತು ಶ್ರಾದ್ಧ ಮುಂತಾದ ಕರ್ಮಗಳನ್ನು ಮಾಡಬಹುದು. ವೇದಕಾಲದಲ್ಲಿ ಊಟೋಪಚಾರ ಮಾಡುವುದು ನಿಷಿದ್ಧವಾಗಿದೆ. ಆದ್ದರಿಂದ ಅಹಾರ ಸೇವಿಸಬಾರದು, ಆದರೆ ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆ ಮತ್ತು ವಿಶ್ರಾಂತಿ ಪಡೆಯುವುದು ಮುಂತಾದ ಕರ್ಮಗಳನ್ನು ಮಾಡಬಹುದು.
ಗ್ರಹಣ ಪರ್ವಕಾಲದಲ್ಲಿ, ಎಂದರೆ ಗ್ರಹಣ ಸ್ಪರ್ಶದಿಂದ ಸೂರ್ಯಾಸ್ತದವರೆಗಿನ ಕಾಲಾವಧಿಯಲ್ಲಿ ನೀರು ಕುಡಿಯುವುದು, ಮಲಮೂತ್ರ ವಿಸರ್ಜನೆ ಮತ್ತು ನಿದ್ದೆ ಈ ಕರ್ಮಗಳು ನಿಷಿದ್ಧವಾಗಿರುವುದರಿಂದ ಅವುಗಳನ್ನು ಮಾಡಬಾರದು. ಮಧ್ಯಾಹ್ನ 12 ಗಂಟೆಯ ಒಳಗೆ ಆಹಾರ ಸೇವಿಸಬೇಕು ಮತ್ತು ಗ್ರಹಣ ಮೋಕ್ಷದ ಬಳಿಕ ಸ್ನಾನ ಮಾಡಿ, ಪೂಜೆ ಪೂರೈಸಿ, ಆಹಾರ ಸಿದ್ಧಪಡಿಸಿಕೊಂಡು ತಿನ್ನಬಹುದಾಗಿದೆ.
ಗ್ರಹಣಕಾಲದಲ್ಲಿ ಮಾಡಿರುವ ಸಾಧನೆಯ ಫಲವು ಸಾವಿರ ಪಟ್ಟಿನಲ್ಲಿ ಹೆಚ್ಚು ದೊರೆಯುತ್ತದೆ. ಇದಕ್ಕಾಗಿ ಗ್ರಹಣಕಾಲದಲ್ಲಿ ಸಾಧನೆಗೆ ಪ್ರಾಧಾನ್ಯತೆ ನೀಡುವುದು ಮಹತ್ವದ್ದಾಗಿದೆ. ವೇಧ ಆರಂಭದಿಂದ ಗ್ರಹಣ ಮುಗಿಯುವ ವರೆಗೂ ನಾಮಜಪ, ಸ್ತೋತ್ರಪಠಣ, ಧ್ಯಾನಧಾರಣೆ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ತೊಡಗಿಸಿದರೆ ಅದರ ಹೆಚ್ಚಿನ ಲಾಭವಾಗುತ್ತದೆ ಎಂದು ವೇದಗಳಲ್ಲಿ ಹೇಳಲಾಗಿದೆ.