ಬೆಂಗಳೂರು:ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಉಸಿರುಗಟ್ಟಿಸುವ ಟ್ರಾಫಿಕ್ ವಿರುದ್ಧ ಆರೋಪಗಳು ಕೇಳಿ ಬರುತ್ತಲೇ ಇವೆ. ಇತ್ತೀಚೆಗೆ ವಿಮಾನ ಪೈಲಟ್‌ಗಳೂ ಟ್ರಾಫಿಕ್ ಬಿಸಿ ಅನುಭವಿಸಿದ್ದು ಸುದ್ದಿಯಾಗಿತ್ತು. ಈಗ ಮಧುಮಗಳೊಬ್ಬಳು ಟ್ರಾಫಿಕ್ ಸಮಸ್ಯೆಯಲ್ಲಿ ಸಿಲುಕಿ ಬುದ್ಧಿವಂತಿಕೆಯಿಂದ ಪಾರಾದ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಆಗಿದ್ದೇನು?: ಕಾರ್‌ನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವಧು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಬೆಂಗಳೂರಿನ ನಿವಾಸಿಯಾದ ವಧು ರೇಷ್ಮೆ ಸೀರೆ, ಚಿನ್ನಾಭರಣ ತೊಟ್ಟು, ಮೇಕಪ್ ಮಾಡಿಕೊಂಡು ಮನೆ ಮಂದಿಯೊಂದಿಗೆ ಕಲ್ಯಾಣ ಮಂಟಪಕ್ಕೆ ಹೊರಟಿದ್ದರು. ಇದೇ ವೇಳೆ ಆಕೆಯಿದ್ದ ಕಾರು ನಗರದ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದೆ. ಕಾರಿಗೆ ಸಣ್ಣ ಅಪಘಾತವೂ ಆಗಿದೆ. ಟ್ರಾಫಿಕ್ ಸಮಸ್ಯೆ ಮತ್ತು ಅಪಘಾತದ ಮಧ್ಯೆ ಸಿಲುಕಿದ ವಧು, ಕೂಡಲೇ ಪಾರಾಗುವ ಪರಿಹಾರ ಮಾರ್ಗದ ಬಗ್ಗೆ ಯೋಚಿಸಿದ್ದಾರೆ. ಸುಮ್ಮನೆ ನಿಂತುಕೊಂಡರೆ ಮುಹೂರ್ತ ಮೀರಿ ಹೋಗುವುದು ಖಚಿತ ಎಂದರಿತ ಅವರು ಕೂಡಲೇ ಕಾರಿನಿಂದಿಳಿದು ನೇರವಾಗಿ ಮೆಟ್ರೋ ರೈಲು ಹತ್ತಿದ್ದಾರೆ. ಕುಟುಂಬ ಸದಸ್ಯರೂ ಸಹ ಆಕೆಯನ್ನು ಹಿಂಬಾಲಿಸಿದ್ದಾರೆ. ಇವರ ವಿಶೇಷ ಮೆಟ್ರೋ ಪ್ರಯಾಣವನ್ನು ವಿಡಿಯೋ ಚಿತ್ರೀಕರಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಈ ವಿಡಿಯೋ ವೈರಲ್ ಆಗ್ತಿದ್ದು, 'ವಾಟ್ ಎ ಬ್ರೈಡ್' ಎಂಬ ಶೀರ್ಷಿಕೆ ನೀಡಲಾಗಿದೆ. ಕೆಲವೇ ಗಂಟೆಗಳಲ್ಲಿ ವಿಡಿಯೋ 8 ಸಾವಿರ ವೀಕ್ಷಣೆ ಪಡೆದಿದೆ. ಇದರೊಂದಿಗೆ ನಗರದಲ್ಲಿ ದಿನ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಈ ಕುರಿತು ಟ್ರಾಫಿಕ್ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.