ಬೆಂಗಳೂರು: ದ್ವಿತೀಯ ಪಿಯುಸಿ ಮೌಲ್ಯಮಾಪನ ಕಾರ್ಯಾರಂಭಗೊಂಡಿದೆ. ರಾಜ್ಯಾದ್ಯಂತ 65 ಕೇಂದ್ರಗಳಲ್ಲಿ 20 ದಿನಗಳ ಕಾಲ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ. ಮೊದಲ ದಿನದ ಮೌಲ್ಯಮಾಪನಕ್ಕೆ 6 ಸಾವಿರ ಉಪನ್ಯಾಸಕರು ಗೈರಾಗಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕಾರಣ ಹೊರತುಪಡಿಸಿ ಗೈರಾಗಿದ್ದಲ್ಲಿ ಅಂತಹ ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಾದ್ಯಂತ ಮಾರ್ಚ್ 09 ರಿಂದ 29ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದ್ದು, ಏಪ್ರಿಲ್ 5 ರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭಗೊಂಡಿದೆ. 20 ದಿನಗಳ ಕಾಲ ನಡೆಯಲಿರುವ ಮೌಲ್ಯಮಾಪನ ಕಾರ್ಯಕ್ಕೆ 25 ಸಾವಿರ ಉಪನ್ಯಾಸಕರನ್ನು ನಿಯೋಜನೆ ಮಾಡಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಸುತ್ತಿದ್ದಾರೆ. ಆದರೆ ಮೊದಲ ದಿನದ ಮೌಲ್ಯಮಾಪನ ಕಾರ್ಯಕ್ಕೆ 6 ಸಾವಿರ ಉಪನ್ಯಾಸಕರು ಗೈರಾಗಿದ್ದು, 19 ಸಾವಿರ ಉಪನ್ಯಾಸಕರು ಮೌಲ್ಯಮಾಪನ ಕಾರ್ಯ ನಡೆಸಿದರು. ಗೈರಾದ ಉಪನ್ಯಾಸಕರ ಸಂಪರ್ಕ ಕಾರ್ಯ ನಡೆಸಲು ಜಿಲ್ಲೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾದವರನ್ನು ಹೊರತುಪಡಿಸಿ ಇತರರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಲು ನಿರ್ದೇಶನ ನೀಡಲಾಗಿದೆ.
ಒಟ್ಟು ದ್ವಿತೀಯ ಪಿಯುಸಿಯಲ್ಲಿ 7.27 ಲಕ್ಷ ವಿದ್ಯಾರ್ಥಿಗಳು 37 ವಿಷಯಗಳಿಗೆ ಪರೀಕ್ಷೆ ಬರೆದಿದ್ದು, 45 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. ಆದರೆ ಮೌಲ್ಯಮಾಪನಕ್ಕಿರುವ ಕೆಲವರನ್ನು ಚುನಾವಣಾ ಕರ್ತವ್ಯಕ್ಕೂ ಬಳಸಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮೌಲ್ಯಮಾಪಕರ ಸಂಖ್ಯೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಶೇ.20ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಉಪನ್ಯಾಸಕರು ಗೈರಾಗಿದ್ದಾರೆ. ಇದು ಹೀಗೆಯೇ ಮುಂದುವರೆದಲ್ಲಿ 20 ದಿನದ ಬದಲಿಗೆ 1 ತಿಂಗಳ ಕಾಲ ಮೌಲ್ಯಮಾಪನ ಕಾರ್ಯ ನಡೆಯಲಿದೆ ಎನ್ನಲಾಗಿದೆ.