ಕರ್ನಾಟಕ

karnataka

ETV Bharat / state

ಎಲ್ಲೆಂದರಲ್ಲಿ ಆಧಾರ್, ಪ್ಯಾನ್ ಕಾರ್ಡ್ ಕೊಡುವ ಮುನ್ನ ಎಚ್ಚರ: 6 ಸೈಬರ್​ ಕ್ರೈಂ ವಂಚಕರ ಬಂಧನ

Six cybercrime accused arrested: ಕೇರಳ ಮೂಲದ ಐದು ಜನ ಸೇರಿ ಒಟ್ಟು ಆರು ಮಂದಿ ಸೈಬರ್​ ಕ್ರೈಂ ವಂಚಕರನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

Six cybercrime accused
6 ಸೈಬರ್​ ಕ್ರೈಂ ವಂಚಕರ ಬಂಧನ

By ETV Bharat Karnataka Team

Published : Nov 17, 2023, 3:40 PM IST

Updated : Nov 17, 2023, 6:55 PM IST

ಸೈಬರ್​ ಕ್ರೈಂ ಪ್ರಕರಣದ ಬಗ್ಗೆ ಆಯುಕ್ತರ ಮಾಹಿತಿ

ಬೆಂಗಳೂರು: ಎಲ್ಲೆಂದರಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಕೊಡ್ತೀರಾ ಅಥವಾ ಯಾರಾದರೂ ಹಣ ಆಮಿಷವೊಡ್ಡಿ ದಾಖಲಾತಿ ಕೇಳುತ್ತಾರೆಯೇ? ಹಾಗಾದರೆ ಇನ್ನು ಮುಂದೆ ಎಚ್ಚರ!ಪುಡಿಗಾಸು ನೀಡಿ ನಿಮ್ಮ‌ ಹೆಸರಿನಲ್ಲಿ ಬ್ಯಾಂಕ್‌ ಖಾತೆ ಸೃಷ್ಟಿಸಿ ಅರಿವಿಲ್ಲದಂತೆ ಸೈಬರ್ ಅಪರಾಧಗಳಲ್ಲಿ ತೊಡಗಿಸಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದ ಜಾಲವನ್ನು ನಗರ‌ ಸೈಬರ್ ಕ್ರೈಂ‌ ಪೊಲೀಸರು ಭೇದಿಸಿದ್ದಾರೆ.

ಪೊಲೀಸರು ಅಮಾಯಕರ ಹೆಸರಿನಲ್ಲಿ ಬೇನಾಮಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ಕ್ರೈಂ ವಂಚನೆಗೆ ಬಳಸುತ್ತಿದ್ದ ಕೇರಳ ಮೂಲದ‌ ಐವರು ಸೇರಿದಂತೆ‌‌ ಒಟ್ಟು ಆರು ಮಂದಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ಇತ್ತೀಚೆಗೆ ಸ್ನೇಹಿತನ ಜೊತೆಗೆ ಮತ್ತಿಕೆರೆಯಲ್ಲಿರುವ ಮನೆಗೆ ಹೋಗಿದ್ದ ಮಂಜೇಶ್ ಎನ್ನುವವರಿಗೆ ಕೆವೈಸಿ ದಾಖಲಾತಿ ನೀಡಿದರೆ 10 ಸಾವಿರ ನೀಡುವುದಾಗಿ ಈ ಆರೋಪಿಗಳು ಆಮಿಷವೊಡ್ಡಿದ್ದರು. ಈ ಬಗ್ಗೆ ಅನುಮಾನಗೊಂಡು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ಹಜರೇಶ್ ಕಿಲ್ಲೇದಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ಕೇರಳ‌ ಮೂಲದ ಕೆ.ಪಿ. ಸಮೀರ್, ಮೊಹಮ್ಮದ್ ಹಸನ್, ಮೊಹಮ್ಮದ್ ಇರ್ಫಾನ್, ಆಯನ್ ಬಾಬು, ತಂಝೀಲ್ ಸಾಹುಲ್ ಹಾಗೂ ಬೆಂಗಳೂರು ಮೂಲದ ಎಚ್.ಸಿ. ಮಂಜುನಾಥ್ ಎಂಬುವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ‌‌‌ ಒಳಪಡಿಸಲಾಗಿದೆ. ಆರೋಪಿಗಳ ಬಂಧನದಿಂದ ಅಮಾಯಕರ ಹೆಸರಿನಲ್ಲಿ ತೆರೆಯಲಾಗಿದ್ದ 126 ಬೇನಾಮಿ ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೇ, ಈ ಆರೋಪಿಗಳು ಕರ್ನಾಟಕದಲ್ಲಿ 25 ಪ್ರಕರಣಗಳು ಸೇರಿದಂತೆ‌ ದೇಶದಲ್ಲಿ‌ ಒಟ್ಟು 75 ಸೈಬರ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ಬಂಧಿತ ಆರೋಪಿಗಳು

ಪ್ರಕರಣ ಮೊದಲ‌ ಆರೋಪಿ ಸಮೀರ್, ಕಳೆದ ಏಳೆಂಟು ವರ್ಷಗಳಿಂದ ಬೆಂಗಳೂರಿನಲ್ಲಿ‌ ನೆಲೆಸಿದ್ದ.‌ ಮತ್ತಿಕೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ.‌ ಈತನೊಂದಿಗೆ ಕೇರಳ‌‌ ಮೂಲದ ಹಸನ್ ತಾಂತ್ರಿಕವಾಗಿ ಪರಿಣಿತಿ ಹೊಂದಿದ್ದರೆ, ಇರ್ಫಾನ್ ದುಬೈಯಲ್ಲಿ‌ ಸೈಬರ್ ಅಪರಾಧ ಎಸಗುವ ಬಗ್ಗೆ ತಿಳಿದುಕೊಂಡಿದ್ದ, ಸಹಚರರನ್ನು ಒಗ್ಗೂಡಿಸಿಕೊಂಡು‌ ಅಮಾಯಕರನ್ನು ಟಾರ್ಗೆಟ್ ಮಾಡಿ ಅವರಿಂದ ಕೆವೈಸಿ ದಾಖಲಾತಿ ಪಡೆದುಕೊಳ್ಳುತ್ತಿದ್ದರು.

ಸ್ಥಳೀಯ ಆರೋಪಿ ಮಂಜುನಾಥ್, ದಾಖಲಾತಿ ಸಂಗ್ರಹಿಸುವ ಕೆಲಸ ವಹಿಸಿಕೊಂಡಿದ್ದ, ಹೊಟೇಲ್‌ ಕಾರ್ಮಿಕರು ಸೇಲ್ಸ್‌ಮ್ಯಾನ್​ಗಳು, ಡೆಲಿವರಿ ಬಾಯ್ಸ್ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಕೆವೈಸಿ ದಾಖಲಾತಿ ಪಡೆದು ತಲಾ ಒಬ್ಬರಿಗೆ ಸುಮಾರು 10 ಸಾವಿರ ರೂಪಾಯಿ ನೀಡುತ್ತಿದ್ದ. ದೊಡ್ಡ ಮಟ್ಟದಲ್ಲಿ ಹಣ ನೀಡುತ್ತಿರುವುದನ್ನು ಕಂಡು ಪ್ರಶ್ನಿಸದೇ ವಂಚಕರು ಕೇಳಿದ ದಾಖಲಾತಿಗಳನ್ನು ಸಾರ್ವಜನಿಕರು ನೀಡುತ್ತಿದ್ದರು. ಅಲ್ಲದೇ ಡಾಕ್ಯೂಮೆಂಟ್​​​​​​​​ಗಳ‌ ಮೇಲೆ‌ ಸಹಿ ಹಾಕುತ್ತಿದ್ದರು. ಪ್ರತಿ ದಾಖಲಾತಿಗೆ ಪ್ರತ್ಯೇಕ ಸಿಮ್ ಕಾರ್ಡ್ ಖರೀದಿಸಿ ಅಮಾಯಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಆರೋಪಿಗಳು ತೆರೆಯುತ್ತಿದ್ದರು.

126 ಬೇನಾಮಿ ಬ್ಯಾಂಕ್ ಖಾತೆ ಪತ್ತೆ:ಅಮಾಯಕರಿಂದ ಪಡೆದ ದಾಖಲಾತಿಗಳ ಆಧಾರದ ಮೇರೆಗೆ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದ ಆರೋಪಿಗಳು ಸಾರ್ವಜನಿಕರ ಹೆಸರಿನಲ್ಲಿ ಖಾತೆ ತೆರೆದು ಈ ಮಾಹಿತಿಯನ್ನು ಸೈಬರ್ ವಂಚಕರಿಗೆ ಒದಗಿಸುವ ದುಷ್ಕೃತ್ಯ ಎಸಗುತ್ತಿದ್ದರು‌.‌ ಅಲ್ಲದೇ ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಮುಗ್ಧ ಜನರಿಂದ ಹಣ ಸಂಗ್ರಹಿಸಿ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸುತ್ತಿದ್ದರು‌‌. ಆನ್‌ಲೈನ್ ಟ್ರೇಡಿಂಗ್ ಮಾತ್ರವಲ್ಲದೇ, ಜಾಬ್ ಆಫರ್, ಕೊರಿಯರ್ ಶುಲ್ಕ ಸೇರಿ ವಿವಿಧ ಸೈಬರ್ ಕ್ರೈ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರು. ದೇಶದ ನಾನಾ ಕಡೆಗಳಲ್ಲಿ 75 ಸೈಬರ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. 126 ಬೇನಾಮಿ‌ ಬ್ಯಾಂಕ್ ಖಾತೆ ಪತ್ತೆ ಹಚ್ಚಲಾಗಿದೆ. ಕರ್ನಾಟಕದಲ್ಲಿ ದಾಖಲಾದ 25 ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 20 ಪ್ರಕರಣ ದಾಖಲಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ:ಸೈಬರ್ ಕ್ರೈಮ್ ಸುಳಿಯಲ್ಲಿ ಸಿಲುಕುವ ಜನ: ಮಾಯಾಜಾಲಕ್ಕೆ ಒಂದೂವರೆ ಕೋಟಿಗೂ ಹೆಚ್ಚು ಹಣ ಕಳೆದುಕೊಂಡ ಉತ್ತರ ಕನ್ನಡಿಗರು

Last Updated : Nov 17, 2023, 6:55 PM IST

ABOUT THE AUTHOR

...view details