ಬೆಂಗಳೂರು:ವೀಸಾ ಅವಧಿ ಮುಗಿದ ನಂತರವೂ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರು ಹಾಗೂ ಅಕ್ರಮ ವಲಸಿಗರನ್ನು ಅವರ ದೇಶಗಳಿಗೆ ವಾಪಸ್ ಕಳುಹಿಸುವವರೆಗೂ ಡಿಟೆನ್ಷನ್ ಸೆಂಟರ್ (ಬಂಧನ ಕೇಂದ್ರ) ನಲ್ಲಿ ಇಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಅಕ್ರಮ ವಲಸಿಗರು, ವಿದೇಶಿಯರನ್ನು ಡಿಟೆನ್ಷನ್ ಕೇಂದ್ರದಲ್ಲಿಡಿ: ಹೈಕೋರ್ಟ್ ಆದೇಶ - High Court order
ವೀಸಾ ಅವಧಿ ಮುಗಿದ ನಂತರವೂ ರಾಜ್ಯದಲ್ಲಿ ನೆಲೆಸಿರುವ ಅಕ್ರಮ ವಲಸಿಗರು ಹಾಗೂ ವಿದೇಶಿಯರ ಕುರಿತು ಹೈಕೋರ್ಟ್ ಇಂದು ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಹೈಕೋರ್ಟ್
ಅಕ್ರಮ ಬಾಂಗ್ಲಾ ವಲಸಿಗರು ಎಂಬ ಆರೋಪದಡಿ ಬಂಧಿತರಾಗಿದ್ದ ಬಾಬುಲ್ ಖಾನ್ ಹಾಗೂ ಥಾನೀಯ ಎಂಬುವರಿಗೆ ಜಾಮೀನು ನೀಡುವ ವೇಳೆ ಹೈಕೋರ್ಟ್ ಈ ಆದೇಶ ಮಾಡಿದೆ. ಅಲ್ಲದೆ, ಅಕ್ರಮ ವಲಸಿಗರು ಹಾಗೂ ವೀಸಾ ಇಲ್ಲದೆ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರ ಪ್ರಕರಣದಲ್ಲಿ ಅನುಸರಿಸಬೇಕಾದ ಹಲವು ಮಾರ್ಗಸೂಚಿಗಳನ್ನು ನೀಡಿದೆ.
ಅಕ್ರಮ ವಲಸಿಗರ ಕುರಿತು ಹೈಕೋರ್ಟ್ ನೀಡಿರುವ ಮಾರ್ಗಸೂಚಿಗಳು:
- ವಿದೇಶಿಯರು ಅಕ್ರಮವಾಗಿ ನೆಲೆಸಿರುವುದು ದೃಢಪಟ್ಟರೆ, ಎಫ್‌ಐಆರ್ ದಾಖಲಿಸಿದ ಕ್ಷಣದಿಂದಲೇ ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಶುರುವಾಗಬೇಕು.
- ಸಂಬಂಧಪಟ್ಟ ಪೊಲೀಸ್ ಠಾಣೆಗಳು ಅಕ್ರಮ ವಾಸಿಗಳ ಗಡಿಪಾರು ಪ್ರಕ್ರಿಯೆ ಕುರಿತು ಸಕ್ಷಮ ಪ್ರಾಧಿಕಾರಗಳಿಗೆ ತುರ್ತಾಗಿ ಮಾಹಿತಿ ನೀಡಬೇಕು.
- ಒಂದೊಮ್ಮೆ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿದ್ದರೆ, ಪ್ರಕರಣ ಇತ್ಯರ್ಥವಾಗುವರೆಗೂ ಆರೋಪಿಗಳನ್ನು ಸಾಮಾನ್ಯ ಜೈಲಿನಲ್ಲಿಡಬೇಕು.
- ಜಾಮೀನಿನ ಮೇಲೆ ಜೈಲಿನಿಂದ ಹೊರಬಂದರೂ ಬಿಡುಗಡೆ ಮಾಡದೆ ವಾಪಸ್ ಕಳುಹಿಸುವವರೆಗೂ ಬಂಧನ ಕೇಂದ್ರದಲ್ಲಿಯೇ ಇರಿಸಬೇಕು.
- ಶಿಕ್ಷೆಗೆ ಗುರಿಯಾದಲ್ಲಿ ಅವಧಿ ಪೂರ್ಣವಾಗುವವರೆಗೆ ಜೈಲಿನಲ್ಲಿಟ್ಟು, ಶಿಕ್ಷಾವಧಿ ಮುಗಿದ ಬಳಿಕ ಗಡಿಪಾರು ಮಾಡುವವರೆಗೆ ಬಂಧನ ಕೇಂದ್ರದಲ್ಲಿಡಬೇಕು.
- ರಾಷ್ಟ್ರೀಯತೆ ಬಗ್ಗೆ ವಿವಾದವಿದ್ದರೆ ಇತ್ಯರ್ಥವಾಗಿ ದೇಶದಿಂದ ಹೊರಗೆ ಕಳಿಸುವವರೆಗೂ ಬಂಧನ ಕೇಂದ್ರದಲ್ಲಿಡಬೇಕು.
- ವಿಚಾರಣಾ ನ್ಯಾಯಾಲಯಗಳು ಇಂತಹವರ ವಿರುದ್ಧದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು ಹಾಗೂ ಅವರ ಹೇಳಿಕೆ ದಾಖಲಿಸಿಕೊಂಡು ಇಂಗ್ಲೀಷ್‌ನಲ್ಲಿಯೇ ತೀರ್ಪು ಬರೆಸಬೇಕು.
- ಬಂಧಿತರು ಮಹಿಳೆಯರು ಅಥವಾ ಮಕ್ಕಳಾಗಿದ್ದರೆ ಜೈಲು ಪ್ರಾಧಿಕಾರ, ಬಂಧನ ಕೇಂದ್ರ, ವಿಚಾರಣಾ ನ್ಯಾಯಾಲಯಗಳು ಮತ್ತು ಬಾಲ ನ್ಯಾಯಮಂಡಳಿ ನಿಯಮಗಳನ್ನು ಮತ್ತು ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಪಾಲಿಸಬೇಕು.