ಬೆಂಗಳೂರು: ತಾನು ಬಿಜೆಪಿ ಸೇರುತ್ತೇನೆ ಎಂದು ಕೇಳಿ ಬರುತ್ತಿರುವ ಮಾತಿಗೆ ಕೊನೆಗೂ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿರುವುದು ಮೂರ್ಖತನದ ಹೇಳಿಕೆ. ಕಾನೂನು ವಿದ್ಯಾರ್ಥಿಯಾಗಿ 1972ರಲ್ಲಿ ರಾಜಕೀಯ ಪ್ರವೇಶ ಮಾಡಿದಾಗಿನಿಂದ ಸಾಮಾಜಿಕ ನ್ಯಾಯ, ಸಮಾನತೆ, ಮೀಸಲಾತಿ ವ್ಯವಸ್ಥೆ ಪರ ಹೋರಾಡುತ್ತಾ ಬಂದಿದ್ದೇನೆ. ಬಿಜೆಪಿ ಈ ಎಲ್ಲಾ ತತ್ವಗಳಿಗೂ ವಿರುದ್ಧವಾಗಿದೆ. ಹೀಗಿರುವಾಗ ಬಿಜೆಪಿ ಸೇರಲು ಸಾಧ್ಯವೇ? ಇದೊಂದು ಮೂರ್ಖತನದ ಪ್ರಚಾರ ಎಂದಿದ್ದಾರೆ.
ಯಾರೇ ಆಗಲಿ ಒಂದು ಸಿದ್ಧಾಂತಕ್ಕೆ ಬದ್ಧವಾಗಿದ್ದಾಗ ಪದೇ ಪದೆ ಪಕ್ಷ ಬದಲಿಸುವಂತಹ ಸನ್ನಿವೇಶವೇ ಉದ್ಭವಿಸುವುದಿಲ್ಲ. ಅವಕಾಶವಾದಿ ರಾಜಕಾರಣಿಗಳು ಮಾತ್ರ ಅಧಿಕಾರ ಹುಡುಕಿಕೊಂಡು ಹೋಗುತ್ತಾರೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಜನರಿಂದ ನೇರವಾಗಿ ಸಿಗಬೇಕೇ ಹೊರತು ವಾಮಮಾರ್ಗದ ಮೂಲಕ ಅಧಿಕಾರ ಪಡೆಯಲು ಹಪಹಪಿಸಬಾರದು ಎಂದು ವಿವರಿಸಿದ್ದಾರೆ.