ಬೆಂಗಳೂರು :ರಾಜ್ಯ ಬಜೆಟ್‍ಗೆ ಸಂಪೂರ್ಣ ಚರ್ಚೆ ಮಾಡದೇ ತರಾತುರಿಯಲ್ಲಿ ಇಂದೇ ಒಪ್ಪಿಗೆ ಪಡೆಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಕನಿಷ್ಠ ಆರು ದಿನಗಳವರೆಗಾದರೂ ಅಧಿವೇಶನ ನಡೆಸಬೇಕೆಂದು ಇಂದು ವಿಧಾನಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಾಳೆಯೇ ಅಧಿವೇಶನ ಮುಗಿಸಬೇಕಾಗಿದ್ದು, ಇಂದು ಸಂಜೆ ವೇಳೆಗೆ ಬಜೆಟ್‍ಗೆ ಒಪ್ಪಿಗೆ ಪಡೆಯಬೇಕಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಕಟಿಸಿದಾಗ ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, 2.34 ಲಕ್ಷ ಕೋಟಿ ರೂ ಬಜೆಟ್‍ನ್ನು ಕೇವಲ ಅರ್ಧ ದಿನದಲ್ಲಿ ಚರ್ಚೆ ಮಾಡಿ ಒಪ್ಪಿಗೆ ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಬಜೆಟ್ ಮೇಲಿನ ಚರ್ಚೆಗೆ ಕನಿಷ್ಠ ಮೂರು ದಿನವಾದರೂ ಅವಕಾಶ ನೀಡಬೇಕು ಹಾಗೆಯೇ ಪ್ರವಾಹ ವಿಚಾರವಾಗಿ ಚರ್ಚೆಯಾಗಬೇಕು. ಒಂದು ವೇಳೆ ಮೂರೇ ದಿನಕ್ಕೆ ಅಧಿವೇಶನ ಮುಗಿಸಿದರೆ ಜನ ತಕ್ಕ ಪಾಠ ಕಲಿಸುತ್ತಾರೆಂದು ಗುಡುಗಿದರು.
ಬಜೆಟ್‍ಗೆ ತರಾತುರಿಯಲ್ಲಿ ಒಪ್ಪಿಗೆಗೆ ಸಿದ್ಧರಾಮಯ್ಯ ವಿರೋಧ ಸರ್ಕಾರದ ಸರ್ವಾಧಿಕಾರ ಧೋರಣೆ ಖಂಡಿಸಿ ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ, ಜನರಿಗಾಗಿರುವ ಅನ್ಯಾಯವನ್ನು ನೋಡಿ ಸುಮ್ಮನಿರುವುದಿಲ್ಲವೆಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನಾನು ಹಣಕಾಸು ಸಚಿವನಾಗಿ 13 ಬಜೆಟ್‍ಗಳನ್ನು ಮಂಡಿಸಿದ್ದೇನೆ. ಯಾವುದಾದರೂ ಬಜೆಟ್‍ಗೆ ಕೇವಲ ಅರ್ಧ ದಿನದಲ್ಲಿ ಒಪ್ಪಿಗೆ ಪಡೆದ ನಿದರ್ಶನವಿದೆಯೇ? ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪನವರಿಗೆ ಸರ್ಕಾರ ಹೊಸದಲ್ಲ. ಅವರ ಸಲಹೆ, ಅಭಿಪ್ರಾಯ ಪಡೆದು ನೂನ್ಯತೆಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಅದಕ್ಕಾಗಿ ಅಧಿವೇಶನದ ಅವಧಿಯನ್ನು ವಿಸ್ತರಿಸಬೇಕೆಂದು ಆಗ್ರಹಿಸಿದರು.
ತರಾತುರಿಯಲ್ಲಿ ಬಜೆಟ್‍ಗೆ ಒಪ್ಪಿಗೆ ಪಡೆಯುವ ಅನಿವಾರ್ಯತೆಯಿಲ್ಲ, ಈ ತಿಂಗಳ 30ರವರೆಗೂ ಅವಕಾಶವಿದೆ. ನೆರೆ ಸಂತ್ರಸ್ತರಿಗೆ ಹಣ ಬಿಡುಗಡೆ ಮಾಡುವುದಾದರೆ ಇಂದೇ ಪೂರಕ ಬಜೆಟ್‍ಗೆ ಒಪ್ಪಿಗೆ ನೀಡೋಣ. ಬಜೆಟ್ ಮೇಲೆ ಮತ್ತು ಪ್ರವಾಹದ ವಿಚಾರದಲ್ಲಿ ಚರ್ಚೆ ಮಾಡದೆ ಸರ್ಕಾರ ಪಲಾಯನ ಮಾಡುತ್ತಿದೆ. ಸರ್ವಾಧಿಕಾರಿ ಧೋರಣೆಯನ್ನು ಮುಂದುವರೆಸಲಾಗುತ್ತಿದ್ದು, ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಲ್ಲಿ, ಮೈತ್ರಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಅನುದಾನ ನಿಲ್ಲಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾರ್ಯಾದೇಶ ನೀಡಿದ್ದ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ. ಇದು ಜನವಿರೋಧ ನಿಲುವು, ಅಮಾನವೀಯವಾದದ್ದು, ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ತೀವ್ರ ವಾಗ್ದಾಳಿ ನಡೆಸಿದರು.
ಬಾದಾಮಿ ಕ್ಷೇತ್ರದಲ್ಲಿ 43 ಹಳ್ಳಿಗಳು ಮುಳುಗಡೆಯಾಗಿವೆ. ಅದೇ ರೀತಿ ಬೆಳಗಾವಿ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲೂ ಸುಮಾರು ಒಂದು ಸಾವಿರ ಹಳ್ಳಿಗಳು ಮುಳುಗಡೆಯಾಗಿದ್ದು, ಅವುಗಳನ್ನು ಸ್ಥಳಾಂತರಿಸಬೇಕು. ಜೊತೆಗೆ ಪುನರ್ವಸತಿ, ಪರಿಹಾರ ಕಾರ್ಯ ತ್ವರಿತವಾಗಿ ಆಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.