ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೇರಲು ಪ್ರಯತ್ನ ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಯ್ಕೆಯ ಲಾಬಿಯನ್ನು ದೆಹಲಿ ಮಟ್ಟದಲ್ಲಿ ನಡೆಸಲು ತೀರ್ಮಾನಿಸಿದ್ದಾರೆ. ಮೇ 13 ರಂದು ರಾಜ್ಯ ವಿಧಾನಸಭೆ ಚುನಾವಣೆಗೆ ನಡೆದ ಮತದಾನದ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಅಭೂತಪೂರ್ವ 135 ಸ್ಥಾನಗಳನ್ನು ಗಳಿಸಿ ಪೂರ್ಣ ಪ್ರಮಾಣದ ಸರ್ಕಾರ ರಚಿಸುವ ಅವಕಾಶ ಪಡೆದಿದೆ.
ಯಾವುದೇ ಅತಂತ್ರ ಸ್ಥಿತಿ ಇಲ್ಲದ ಹಿನ್ನೆಲೆಯಲ್ಲಿ ಮುಂದಿನ 5 ವರ್ಷ ಸರಾಗ ಹಾಗೂ ಸುಲಲಿತವಾಗಿ ಸರ್ಕಾರ ನಡೆಸಿಕೊಂಡು ಸಾಗುವ ಅವಕಾಶ ಇರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಂಘಟನೆ ಮಾಡಿರುವ ಡಿಕೆಶಿ ಹಾಗೂ ಹೆಚ್ಚಿನ ಶಾಸಕರ ಬೆಂಬಲ ಹೊಂದಿರುವ ಕಾರಣಕ್ಕೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಪಕ್ಷದಲ್ಲಿ 10ಕ್ಕೂ ಹೆಚ್ಚು ಮಂದಿ ಸಿಎಂ ಆಕಾಂಕ್ಷಿಗಳು ತಮ್ಮದೇ ಆದ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರುಗಳೆಂದರೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್.
ಫಲಿತಾಂಶದ ಬಳಿಕ ನಿನ್ನೆ(ಭಾನುವಾರ) ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು. ಈ ಸಭೆಯಲ್ಲಿ ಎಐಸಿಸಿಯಿಂದ ನೇಮಕಗೊಂಡ ಮೂವರು ವೀಕ್ಷಕರು ಹಾಗೂ ರಾಷ್ಟ್ರೀಯ ನಾಯಕರು ರಾಜ್ಯದ 135 ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ನಡೆದಿರುವ ಈ ಗುಪ್ತ ಮತದಾನದ ವಿವರದೊಂದಿಗೆ ವೀಕ್ಷಕರು ದಿಲ್ಲಿಗೆ ತೆರಳಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಸ್ತಾಂತರಿಸಲಿದ್ದಾರೆ.
ಪಕ್ಷ ಸಂಘಟನೆಗೆ ದುಡಿದಿರುವ ಹಿನ್ನೆಲೆಯಲ್ಲಿ ತಮಗೆ ಅವಕಾಶ ನೀಡಬೇಕೆಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಹೆಚ್ಚು ಶಾಸಕರ ಬೆಂಬಲ ತಮಗಿದ್ದು ತಾವು ಸಹ ಸಿಎಂ ಆಗುವ ಅರ್ಹತೆ ಹೊಂದಿರುವುದಾಗಿ ಸಿದ್ದರಾಮಯ್ಯ ಪ್ರತಿಪಾದಿಸುತ್ತಿದ್ದಾರೆ. ಇಬ್ಬರೂ ಪ್ರಬಲ ನಾಯಕರು ಪಕ್ಷದ ಉನ್ನತ ಸ್ಥಾನಕ್ಕಾಗಿ ಪೈಪೋಟಿ ನಡೆಸಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಸಕರ ಒಲವು ಯಾರ ಕಡೆ ಇದೆ ಎಂಬ ಮಾಹಿತಿ ಇದುವರೆಗೂ ದೃಢಪಟ್ಟಿಲ್ಲ.
ನಿಗದಿಯಾಗದ ಡಿಕೆಶಿ ದೆಹಲಿ ಪ್ರವಾಸ: ಸದ್ಯ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಅವಕಾಶ ಹೈಕಮಾಂಡ್ ಮುಂದೆ ಇದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ತಮ್ಮ ಪ್ರಯತ್ನವನ್ನು ದೆಹಲಿ ಮಟ್ಟದಲ್ಲಿ ನಡೆಸಲು ತೀರ್ಮಾನಿಸಿದ್ದಾರೆ. ಇಂದು ತಮ್ಮ 62ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿ ತಮ್ಮ ಪ್ರಯತ್ನವನ್ನು ನಡೆಸುವುದರ ವಿಚಾರವಾಗಿ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಂಜೆಯ ವೇಳೆಗೆ ನಿರ್ಧಾರ ಕೈಗೊಂಡು ದೆಹಲಿಯತ್ತ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.