ಕರ್ನಾಟಕ

karnataka

By

Published : Jun 2, 2022, 5:06 PM IST

ETV Bharat / state

ಬಿಜೆಪಿಯವರ ಜಾಹೀರಾತು ರಾಜ್ಯಕ್ಕೆ ಅವಮಾನ : ಸಿದ್ದರಾಮಯ್ಯ

ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುಗೆ ನೀಡಿದೆ ಎಂದು ಬಿಜೆಪಿಯವರು ನೀಡುತ್ತಿರುವ ಜಾಹೀರಾತು ರಾಜ್ಯದ ಜನತೆಗೆ ಮಾಡುತ್ತಿರುವ ಅವಮಾನ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ. ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಅವರು, ಕೊಡುಗೆ ಎಂಬ ಪದ ಬಳಸಿ ಜಾಹೀರಾತು ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

siddaramaiah-said-the-bjps-advertising-was-an-insult-to-the-state
ಬಿಜೆಪಿಯವರ ಜಾಹೀರಾತು ರಾಜ್ಯಕ್ಕೆ ಅವಮಾನ : ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುಗೆ ನೀಡಿದೆ ಎಂದು ಬಿಜೆಪಿಯವರು ನೀಡುತ್ತಿರುವ ಜಾಹೀರಾತು ರಾಜ್ಯದ ಜನತೆಗೆ ಮಾಡುತ್ತಿರುವ ಅವಮಾನ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ. ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಅವರು, ಕೊಡುಗೆ ಎಂಬ ಪದ ಬಳಸಿ ಜಾಹೀರಾತು ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ರಾಜ್ಯ ಬಿಜೆಪಿಯವರಿಗೆ ತಲೆ ಸರಿ ಇದೆಯೇ ?: ರಾಜ್ಯ ಮತ್ತು ಕೇಂದ್ರದ ಬಿಜೆಪಿಯವರು ನಮ್ಮ ರಾಜ್ಯದ ಜನರನ್ನೇನು ದಡ್ಡರು, ಯೋಚಿಸುವ ಶಕ್ತಿ ಇಲ್ಲದವರು ಎಂದುಕೊಂಡಿದ್ದಾರಾ? ಈ ಬಿಜೆಪಿಯವರ ತಲೆ ಸರಿ ಇದೆಯಾ? 2014 ರಿಂದ ಇದುವರೆಗೆ 8 ವರ್ಷಗಳಲ್ಲಿ ರಾಜ್ಯಕ್ಕೆ 1,29 ಲಕ್ಷ ಕೋಟಿ ರೂಗಳನ್ನು ನರೇಂದ್ರ ಮೋದಿಯವರು “ಕೊಡುಗೆ” ನೀಡಿದ್ದಾರೆ ಎಂದು ಪ್ರತಿ ನಿತ್ಯ ಜಾಹೀರಾತು ನೀಡಲಾಗುತ್ತಿದೆ. ಕೊಡುಗೆ ಎಂಬ ಪದ ಬಳಸಲು ಮೋದಿಯವರೋ ಇಲ್ಲ ಬಿಜೆಪಿಯವರೋ ಅವರ ಸ್ವಂತ ಮನೆಯಿಂದ ತೆಗೆದು ಖುಷಿಗೆ ಗಿಫ್ಟು ಕೊಡುವಂತೆ ಏನಾದರೂ ರಾಜ್ಯಕ್ಕೆ ಕೊಟ್ಟಿದ್ದಾರಾ?.

ರಾಜ್ಯದ ಬಿಜೆಪಿ ಸರ್ಕಾರಕ್ಕೆ ಏನಾದರೂ ಬೆನ್ನು ಮೂಳೆ ಇದ್ದರೆ ಮೊದಲು ಈ ಜಾಹಿರಾತಿಗೆ ವಿರೋಧ ವ್ಯಕ್ತಪಡಿಸಬೇಕಾಗಿತ್ತು. ಯಾಕೆಂದರೆ ಕಳೆದ 8 ವರ್ಷಗಳಲ್ಲಿ ಮೋದಿಯವರ ರಾಜ್ಯ ವಿರೋಧಿ ಧೋರಣೆಯಿಂದ ನಾವು ಬಹಳಷ್ಟನ್ನು ಕಳೆದುಕೊಂಡಿದ್ದೇವೆ. ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಈ 8 ವರ್ಷಗಳಲ್ಲಿ ನಮ್ಮ ರಾಜ್ಯದಿಂದ ಕನಿಷ್ಠ ಎಂದರೂ 19 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

ಒಂದರ್ಥದಲ್ಲಿ ದೋಚಿಕೊಂಡಿದೆ ಎಂದರೂ ಸರಿಯೆ. ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಿ ಟಿಪ್ಸ್ ಕೊಟ್ಟಂತೆ ಕೆಲವು ಯೋಜನೆಗಳಿಗೆ ಕೊಟ್ಟಿರುವ 1.29 ಲಕ್ಷ ಕೋಟಿ ಅನುದಾನಗಳನ್ನು ಕೊಡುಗೆ ಎಂದು ಹೇಳಿ ರಾಜ್ಯದ ಸ್ವಾಭಿಮಾನವನ್ನು ದೆಹಲಿಯ ಕಾಲ ಕೆಳಗೆ ಹಾಕಿರುವ ರಾಜ್ಯ ಬಿಜೆಪಿಗರಿಗೆ ಸ್ವಾಭಿಮಾನ ಎಂಬುದು ಏನಾದರೂ ಇದೆಯೆ? ಎಂಬ ಪ್ರಶ್ನೆಯನ್ನು ಈ ನಾಡಿನ ಪ್ರಜ್ಞಾವಂತರು ಕೇಳುತ್ತಿದ್ದಾರೆ.

ಇದರಲ್ಲಿ ನರೇಗ ಯೋಜನೆಯಲ್ಲಿ ಜನರು ಕೂಲಿ ಮಾಡಿದ ಹಣ 27,418 ಕೋಟಿಗಳಷ್ಟಿದೆ. ಹಾಗೆಯೇ ಜನರ ವಿಮೆ ಹಣ ಮುಂತಾದವುಗಳೆಲ್ಲ ಈ ಕೊಡುಗೆಯಲ್ಲಿ ಸೇರಿವೆ. ನರೇಗಾ ಮುಂತಾದ ಯೋಜನೆಗಳಲ್ಲಿ ಜನರ ಬೆವರಿಗೆ ಕೊಡುವ ಪ್ರತಿಫಲವನ್ನು ಈ ಬಿಜೆಪಿಯವರು ಕೊಡುಗೆ ಎನ್ನುತ್ತಾರಲ್ಲ, ಇವರು ಮನುಷ್ಯರಾ ಎಂಬುದು ನನ್ನ ಅನುಮಾನ ಎಂದಿದ್ದಾರೆ.

ಎರಡನೇ ಅತೀ ಹೆಚ್ಚು ಜಿಎಸ್​ಟಿ ಪಾವತಿಸುವ ರಾಜ್ಯ ಕರ್ನಾಟಕ : ಕರ್ನಾಟಕವು ದೇಶದ ಆರ್ಥಿಕತೆಗೆ ಅತಿದೊಡ್ಡ ಕೊಡುಗೆ ನೀಡುತ್ತಿರುವ ಎರಡನೆ ರಾಜ್ಯ. ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಜಿಎಸ್‍ಟಿ ಪಾವತಿಸುತ್ತಿರುವ ರಾಜ್ಯ ನಮ್ಮದು. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆಯ ಪಾವತಿಯಲ್ಲೂ ಸಹ ನಮ್ಮ ರಾಜ್ಯವು ನಿರಂತರವಾಗಿ ಎರಡು ಅಥವಾ ಮೂರನೆ ಸ್ಥಾನದಲ್ಲಿದೆ.

ನನ್ನ ಬಳಿ ಆದಾಯ ತೆರಿಗೆ ಇಲಾಖೆಯ 2018-19 ರ ಅಧಿಕೃತ ದಾಖಲೆ ಇದೆ. ಅದರ ಪ್ರಕಾರ ಮಹಾರಾಷ್ಟ್ರವು 4.25 ಲಕ್ಷ ಕೋಟಿ ರೂಗಳಷ್ಟನ್ನು ನೇರ ತೆರಿಗೆಯ ರೂಪದಲ್ಲಿ ಪಾವತಿಸುತ್ತಿದೆ. ದೆಹಲಿಯು 1.66 ಲಕ್ಷ ಕೋಟಿಗಳನ್ನು ಪಾವತಿಸಿತ್ತು. ನಮ್ಮ ರಾಜ್ಯದಿಂದ 1.20 ಲಕ್ಷ ಕೋಟಿಗಳನ್ನು ಕೇಂದ್ರವು ನೇರ ತೆರಿಗೆಯ ಮೂಲಕ ಸಂಗ್ರಹಿಸಿತ್ತು. ಪ್ರಸ್ತುತ ಕರ್ನಾಟಕವು 1.40 ಲಕ್ಷ ಕೋಟಿಗಳಷ್ಟು ನೇರ ತೆರಿಗೆಯನ್ನು [ಆದಾಯ ಮತ್ತು ಕಾರ್ಪೊರೇಟ್ ತೆರಿಗೆ] ಯನ್ನು ಪಾವತಿಸುತ್ತಿದೆ.

ಉಳಿದಂತೆ ಗುಜರಾತ್ ಮಾಡೆಲ್ ಎಂದು ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿಯವರ ರಾಜ್ಯವಾದ ಗುಜರಾತ್ 2018-19 ರಲ್ಲಿ ಪಾವತಿಸಿದ್ದು ಕೇವಲ 49 ಸಾವಿರ ಕೋಟಿ ಮಾತ್ರ. ಆಂಧ್ರ ಪ್ರದೇಶ 46 ಸಾವಿರ ಕೋಟಿ, ಮಧ್ಯಪ್ರದೇಶ 19.7 ಸಾವಿರ ಕೋಟಿ, ಬಿಹಾರ 6.2 ಸಾವಿರ ಕೋಟಿ, ರಾಜಸ್ತಾನ 21 ಸಾವಿರ ಕೋಟಿ, ಉತ್ತರ ಪ್ರದೇಶ 27 ಸಾವಿರ ಕೋಟಿ ಮಾತ್ರ. ತಮಿಳುನಾಡು 74.3 ಸಾವಿರ ಕೋಟಿ ಪಾವತಿಸಿದೆ ಎಂದು ಹೇಳಿದ್ದಾರೆ.

ಅಂಕಿ- ಅಂಶ ಸಮೇತ ಸಿದ್ದರಾಮಯ್ಯ ತರಾಟೆ:2018-19 ರ ಮಾಹಿತಿಯ ಪ್ರಕಾರ ದೇಶದ ಬೊಕ್ಕಸಕ್ಕೆ ನೇರ ತೆರಿಗೆಯ ಮೂಲಕ 11.37 ಲಕ್ಷ ಕೋಟಿ ರೂ ತೆರಿಗೆ ಸಂದಾಯವಾಗಿದ್ದರೆ, ಮಹಾರಾಷ್ಟ್ರವೂ ಸೇರಿದಂತೆ ದಕ್ಷಿಣದ 6 ರಾಜ್ಯಗಳು ದೇಶದ ಬೊಕ್ಕಸಕ್ಕೆ 6.96 ಲಕ್ಷ ಕೋಟಿ ರೂಗಳನ್ನು ಪಾವತಿಸಿದ್ದವು. ಇದು ಒಟ್ಟು ನೇರ ತೆರಿಗೆಯಲ್ಲಿ ಶೇ.62 ರಷ್ಟಾಗುತ್ತದೆ. ಜಿ.ಎಸ್.ಟಿ ಯಲ್ಲಿ 2022 ರ ಏಪ್ರಿಲ್ ತಿಂಗಳ ಉದಾಹರಣೆಯೊಂದನ್ನೇ ತೆಗೆದುಕೊಂಡರೆ ಮಹಾರಾಷ್ಟ್ರ ರೂ.27.5 ಸಾವಿರ ಕೋಟಿ, ಕರ್ನಾಟಕ ರೂ.11.82 ಸಾವಿರ ಕೋಟಿ, ಉತ್ತರ ಪ್ರದೇಶ ರೂ.8.5 ಸಾವಿರ ಕೋಟಿ, ರಾಜಸ್ತಾನ ರೂ.4.5 ಸಾವಿರ ಕೋಟಿ, ಮಧ್ಯಪ್ರದೇಶ ರೂ.3.3 ಸಾವಿರ ಕೋಟಿ, ಬಿಹಾರ ರೂ.1.4 ಸಾವಿರ ಕೋಟಿ, ಆಂಧ್ರ ಮತ್ತು ತೆಲಂಗಾಣ ಗಳೆರಡು ರೂ.9.00 ಸಾವಿರ ಕೋಟಿ ಮಾತ್ರ ಪಾವತಿಸಿವೆ. ಈ ವಿಚಾರದಲ್ಲೂ ಸರಿಸುಮಾರು ಶೇ.50 ರಷ್ಟು ತೆರಿಗೆಯನ್ನು ದಕ್ಷಿಣದ 6 ರಾಜ್ಯಗಳು ಪಾವತಿಸುತ್ತಿವೆ ಎಂದು ತಿಳಿಸಿದ್ದಾರೆ.

ಕಳೆದ 8 ವರ್ಷಗಳಿಂದ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವೊಂದರಿಂದಲೇ ಸರಿ ಸುಮಾರು ರೂ.19 ಲಕ್ಷ ಕೋಟಿಗಳನ್ನು ನೇರ ಮತ್ತು ಪರೋಕ್ಷ ತೆರಿಗೆಗಳ ರೂಪದಲ್ಲಿ ಸಂಗ್ರಹಿಸಿದೆ. ಕಳೆದ ವರ್ಷ ಕೋವಿಡ್ ಸಂದರ್ಭದಲ್ಲೂ ಕೂಡಾ ಸುಮಾರು ರೂ.3 ಲಕ್ಷ ಕೋಟಿಗಳನ್ನು ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಸಂಗ್ರಹಿಸಿದೆ.

ರಾಜ್ಯಕೊಳ್ಳೆ ಹೊಡೆದ ಮೋದಿ: ಮನಮೋಹನಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ನಮ್ಮ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯಿಂದ 2012 ಮತ್ತು 2013 ರ ಸಾಲಿನಲ್ಲಿ ಮೂರೂವರೆ ಸಾವಿರ ಕೋಟಿಗಳನ್ನು ಮಾತ್ರ ಸಂಗ್ರಹಿಸಿದ್ದರು. ಮೋದಿಯವರು ಪ್ರಧಾನಿಗಳಾದ ಮೇಲೆ ನಮ್ಮ ರಾಜ್ಯದಿಂದ ವರ್ಷಕ್ಕೆ 35000 ಗಳಿಂದ 40000 ಕೋಟಿಗಳನ್ನು ಸಂಗ್ರಹಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬಾಬ್ತಿನಿಂದಲೇ ಮೋದಿಯವರ ಸರ್ಕಾರ ಕರ್ನಾಟಕ ರಾಜ್ಯದಿಂದ ಕನಿಷ್ಠ ಎಂದರೂ 150000 ಕೋಟಿ ರೂಗಳನ್ನು ದೋಚಿಕೊಂಡಿದೆ.

ಇಷ್ಟಾದರೂ ರಾಜ್ಯ , ಕೇಂದ್ರ ಬಿಜೆಪಿ ಸರ್ಕಾರಗಳು ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ 2014 ರಿಂದ 2022 ರವರೆಗೆ ರೂ.1,29,776 ಕೋಟಿ ರೂಗಳನ್ನು ಕೇಂದ್ರದ ವಿವಿಧ ಯೋಜನೆಗಳಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದು ರಾಜ್ಯವು ಪಾವತಿಸಿದ ಒಟ್ಟು ತೆರಿಗೆಯಲ್ಲಿ ಶೇ.6.8 ರಷ್ಟು ಮಾತ್ರ ನಮ್ಮ ರಾಜ್ಯದಲ್ಲಿ ಖರ್ಚು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದರ ನಂತರ ರೂ.2,14,603 ಕೋಟಿ ರೂಗಳನ್ನು ತೆರಿಗೆಯ ಹಣದಿಂದ ಮರು ಹಂಚಿಕೆ ಮಾಡಿದ್ದಾರೆ. ಇದು ರಾಜ್ಯದಿಂದ ಸಂಗ್ರಹಿಸಿದ ತೆರಿಗೆಯಲ್ಲಿ ಶೇ.11.29 ರಷ್ಟು ಮಾತ್ರ ಇದೆ. ಈ ರೂ.19 ಲಕ್ಷ ಕೋಟಿಗಳಲ್ಲಿ ತೆರಿಗೆ ಹಂಚಿಕೆ, ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಹಾಗೂ ಇತರ ಯೋಜನಾ ಆಯೋಗದ ಅನುದಾನಗಳ ರೂಪದಲ್ಲಿ (ಕೇಂದ್ರ ಇಲಾಖೆಗಳು ತೆಗೆದುಕೊಳ್ಳುವ ಕಾಮಗಾರಿಗಳು, ಕಾರ್ಯಕ್ರಮಗಳನ್ನು ಹೊರತುಪಡಿಸಿ) ನಮಗೆ ಬರಬೇಕಾಗಿದ್ದ ಅನುದಾನ ಶೇ.42 ರ ಅನುಪಾತದಲ್ಲಿ ರೂ.8 ಲಕ್ಷ ಕೋಟಿ ರೂ ಸಿಗಬೇಕು.

ಉಳಿದ ಹೆಚ್ಚುವರಿ ತೆರಿಗೆಯ ಹಣದಿಂದ ಕೇಂದ್ರದ ಅನುದಾನ :ಇದಲ್ಲದೇ ರಾಜ್ಯಗಳಿಗೆ ಹಂಚಿಕೆ ಮಾಡಿದ ಬಳಿಕ ಕೇಂದ್ರ ತನ್ನ ಬಳಿ ಉಳಿಸಿಕೊಳ್ಳುವ ಶೇ. 58 ಕ್ಕೂ ಹೆಚ್ಚುವರಿ ಅನುದಾನವಿದೆಯಲ್ಲ, ಅದರಲ್ಲಿ ಅದರ ಇಲಾಖೆಗಳ ಮೂಲಕ ರಾಜ್ಯಕ್ಕೆ ಬೇರೆ ಬೇರೆ ಯೋಜನೆಗಳಿಗಳಿಗಾಗಿ ಬಿಡುಗಡೆ ಮಾಡಿದೆ. ಇದು 1.29 ಲಕ್ಷ ಕೋಟಿ. ಇದನ್ನೇ ಅವರು ಜಾಹೀರಾತಿನಲ್ಲಿ ಹೇಳಿಕೊಳ್ಳುತ್ತಿರುವುದು. ರಾಜ್ಯದ ಮೇಲಿನ ಬಿಜೆಪಿಯವರ ಕ್ರೌರ್ಯವನ್ನು ಯಾವ ಮಾತುಗಳಲ್ಲಿ ವಿವರಿಸಬೇಕು ಹೇಳಿ ಎಂದು ಕೇಳಿದ್ದಾರೆ.

ಜಿಎಸ್‍ಟಿಯಂತಹ ಅಪಕ್ವ ಯೋಜನೆಯನ್ನು ಅನುಷ್ಠಾನ ಮಾಡುವುದಕ್ಕೆ ಮೊದಲು ನಮ್ಮ ರಾಜ್ಯದ ತೆರಿಗೆ ಸಂಗ್ರಹದ ಪ್ರಮಾಣ ಶೇ.14 ರಿಂದ ಶೇ.15 ರಷ್ಟಿತ್ತು. 2015-16 ರಲ್ಲಿ ನಮ್ಮ ಒಟ್ಟು ತೆರಿಗೆ ಸಂಗ್ರಹ ರೂ.1,18,817 ಕೋಟಿಗಳಷ್ಟಿತ್ತು. ಇದು ಶೇ.14 ರ ಪ್ರಮಾಣದಲ್ಲಿ ಬೆಳವಣಿಗೆಯಾಗಿದ್ದರೆ ಈ ವರ್ಷ ನಮ್ಮ ತೆರಿಗೆ ಸಂಗ್ರಹದ ಪ್ರಮಾಣ ರೂ.297,315 ಕೋಟಿಗಳಷ್ಟಿರಬೇಕಿತ್ತು.

ಆದರೆ ಈ ವರ್ಷ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ರೂ.1,89,887 ಕೋಟಿಗಳಷ್ಟು ತೆರಿಗೆ ಸಂಗ್ರಹವಾಗಬಹುದು ಎಂದು ಅಂದಾಜಿಸಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರದ ಅಡ್ಡ ಕಸುಬಿ ಆರ್ಥಿಕ ನೀತಿಗಳಿಂದಾಗಿ ರಾಜ್ಯವು ಈ 8 ವರ್ಷಗಳಲ್ಲಿ ಕಳೆದುಕೊಂಡದ್ದು ರೂ.2,96,000 ಕೋಟಿಗಳಷ್ಟು. ಕಳೆದ 8 ವರ್ಷಗಳ ಸರಾಸರಿ ತೆರಿಗೆ ಸಂಗ್ರಹ ಪ್ರಮಾಣ ಶೇ.6 ರಷ್ಟು ಮಾತ್ರ ಇದೆ.

ಇದರಿಂದಾಗಿ ರಾಜ್ಯದ ಆರ್ಥಿಕತೆ ಸಂಕಷ್ಟದ ಸುಳಿಗೆ ಸಿಲುಕಿ ಸಾಲಗಾರ ರಾಜ್ಯವಾಗುತ್ತಿದೆ. ಇದರ ಜೊತೆಗೆ ಬಿಜೆಪಿಯವರ 40 ಪರ್ಸೆಂಟ್ ಕಮಿಷನ್‍ನಿಂದಾಗಿ ರಾಜ್ಯ ದಿವಾಳಿಯಾಗುತ್ತಿದೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಓದಿ :ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತ್ತಿತ್ತು: ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ

ABOUT THE AUTHOR

...view details