ಕರ್ನಾಟಕ

karnataka

ETV Bharat / state

ಮುಸ್ಲಿಂ ಮೀಸಲಾತಿ ರದ್ದತಿಗೆ ಸುಪ್ರೀಂ ಕೋರ್ಟ್ ತಪರಾಕಿ ನಿರೀಕ್ಷಿತ: ಸಿದ್ದರಾಮಯ್ಯ - etv bharat kannada

ಕರ್ನಾಟಕ ಬಿಜೆಪಿ ಸರ್ಕಾರವು ಶೇ 4ರಷ್ಟಿದ್ದ ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿರುವುದಕ್ಕೆ ಸುಪ್ರೀಂ ಕೋರ್ಟ್‌ ನಿನ್ನೆ ಅಸಮಾಧಾನ ವ್ಯಕ್ತಪಡಿಸಿದ್ದು, ಇಂದು ಸಿದ್ದರಾಮಯ್ಯ ಟ್ವೀಟ್‌ ಮೂಲಕ ಸರ್ಕಾರವನ್ನು ಟೀಕಿಸಿದ್ದಾರೆ.

Etv Bharatsiddaramaiah-reaction-on-karnataka-reservation-issue
ಮುಸ್ಲಿಂ ಮೀಸಲಾತಿ ರದ್ದತಿ: ರಾಜ್ಯಕ್ಕೆ ಸುಪ್ರೀಂ ಕೋರ್ಟ್ ತಪರಾಕಿ ನಿರೀಕ್ಷಿತ - ಸಿದ್ದರಾಮಯ್ಯ

By

Published : Apr 14, 2023, 4:36 PM IST

ಬೆಂಗಳೂರು: ಮುಸ್ಲಿಂ ಮೀಸಲಾತಿ ರದ್ದತಿಗಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿರುವ ತಪರಾಕಿ ನಿರೀಕ್ಷಿತವಾಗಿತ್ತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ, ಮೀಸಲಾತಿ ಪರಿಷ್ಕರಣೆ ಮಾಡಿದ್ದ ಬಿಜೆಪಿ ಸರ್ಕಾರದ ನಿರ್ಧಾರ ದೋಷಪೂರಿತವಾದುದ್ದು ಎಂದು ನಿನ್ನೆ ಸುಪ್ರೀಂ ಕೋರ್ಟ್ ಹೇಳಿದ್ದು, ಈ ಸಂಬಂಧ ಇಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಚುನಾವಣೆಯನ್ನು ಮನಸ್ಸಲ್ಲಿಟ್ಟುಕೊಂಡು ಹಿಂದೂ ಮತಗಳ ಧ್ರುವೀಕರಣದ ದುರುದ್ದೇಶದ ಈ ನಿರ್ಧಾರವನ್ನು ರಾಜ್ಯ ಸರ್ಕಾರ ಈಗಲಾದರೂ ವಾಪಸ್ ಪಡೆದು ಮಾನ ಉಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಮುಸ್ಲಿಂ ಮೀಸಲಾತಿ ರದ್ದತಿ ಬಗ್ಗೆ ಕರ್ನಾಟಕ ಸರ್ಕಾರ ಕೈಗೊಂಡಿರುವ ನಿರ್ಧಾರ ‘ದೋಷಪೂರಿತ’ ಮತ್ತು ‘ತಪ್ಪು ಕಲ್ಪನೆ’ಯನ್ನು ಆಧರಿಸಿದೆ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಬುನಾದಿಯೇ ಅತ್ಯಂತ ಅಸ್ಥಿರವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿರುವುದು ರಾಜ್ಯ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದೆ ಎಂದಿದ್ದಾರೆ.

‘ಮುಸ್ಲಿಮರು ಕೇವಲ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ’ ಎಂದು ಚಿನ್ನಪ್ಪ ರೆಡ್ಡಿ ಆಯೋಗ ಪರಿಗಣಿಸಿತ್ತು ಎಂಬ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಹೇಳಿಕೆ ಸಂಪೂರ್ಣ ತಪ್ಪು ಮಾಹಿತಿಯಾಗಿದೆ. ‘ಮುಸ್ಲಿಂಮರು ಸಾಮಾಜಿಕವಾಗಿಯೂ ಹಿಂದುಳಿದಿದ್ದಾರೆ’ ಎಂದು ಚಿನ್ನಪ್ಪ ರೆಡ್ಡಿ ಆಯೋಗ ಹೇಳಿತ್ತು ಎಂದು ತಿಳಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಯನ ಆಧರಿತವಾದ ವರದಿ, ವಿಶ್ವಾಸಾರ್ಹ ಅಂಕಿ-ಅಂಶಗಳ ಸಂಗ್ರಹ ಹೀಗೆ ಯಾವುದೇ ತಯಾರಿ ಇಲ್ಲದೆ ಅತ್ಯವಸರದಿಂದ ಮುಸ್ಲಿಂ ಮೀಸಲಾತಿ ರದ್ದುಪಡಿಸಿರುವುದಕ್ಕೆ ಚುನಾವಣಾ ಲಾಭದ ದುರುದ್ದೇಶ ಬಿಟ್ಟರೆ ಬೇರೆ ಕಾರಣಗಳಿರಲಿಲ್ಲ. ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ ಉಳಿಸಿಕೊಂಡ ಶೇಕಡಾ 4ರಷ್ಟು ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಿಕೆ ಮಾಡಿರುವುದರಿಂದ ಮುಸ್ಲಿಂ ಮೀಸಲಾತಿ ರದ್ದತಿ ಆದೇಶ ರದ್ದಾದರೆ ಆ ಎರಡೂ ಸಮುದಾಯಗಳಿಗೆ ನೀಡಿರುವ ಹೆಚ್ಚುವರಿ ಮೀಸಲಾತಿಯೂ ರದ್ದಾಗುತ್ತದೆ ಎಂದಿದ್ದಾರೆ.

ಒಳ ಮೀಸಲಾತಿ ಮತ್ತು ಒಕ್ಕಲಿಗ, ಲಿಂಗಾಯತ ಇಲ್ಲವೇ ಇತರ ಅರ್ಹ ಜಾತಿಗಳಿಗೆ ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್ ಪಕ್ಷದ ವಿರೋಧ ಇಲ್ಲ. ಆದರೆ ಕಲ್ಪಿತ ಸುಳ್ಳುಗಳ ಮೂಲಕ ಬಿಜೆಪಿ ಕನ್ನಡಿಯೊಳಗಿನ ಗಂಟು ತೋರಿಸಿ ಜನರನ್ನು ತಪ್ಪು ದಾರಿಗೆಳೆಯಲು ಹೊರಟಿದೆ. ಒಟ್ಟು ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇಕಡ 75ಕ್ಕೆ ಹೆಚ್ಚಿಸಿ ಪ್ರತಿಯೊಂದು ಜಾತಿಗಳಿಗೆ ಅವುಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವುದೊಂದೇ ಈಗಿನ ಮೀಸಲಾತಿ ವಿವಾದಕ್ಕೆ ಶಾಶ್ವತ ಪರಿಹಾರ ಎಂದಿದ್ದಾರೆ.

ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿ ಎಲ್ಲ ಜಾತಿ ಜನರಿಗೆ ಅವರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಲು ಖಂಡಿತ ಕ್ರಮಕೈಗೊಳ್ಳುತ್ತೇವೆ. ಯಾರ ಮೀಸಲಾತಿಯನ್ನೂ ರದ್ದುಗೊಳಿಸದೆ ಸರ್ವಸಮ್ಮತ ಪರಿಹಾರ ನೀಡುತ್ತೇವೆ. ಮೀಸಲಾತಿಗೆ ಶೇಕಡಾ 50ರ ಮಿತಿ ಎನ್ನುವುದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಭಾಗವೇ ಹೊರತು ಅದು ಸಾಂವಿಧಾನಿಕವಾದುದೇನಲ್ಲ ಎಂದು ತಿಳಿಸಿದ್ದಾರೆ.

ವಿಶೇಷ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬಹುದೆಂದು ಅದೇ ಆದೇಶದಲ್ಲಿ ಹೇಳಲಾಗಿದೆ. ನ್ಯಾಯವಾದಿ ಕಾಂತರಾಜ್ ಅಧ್ಯಕ್ಷತೆಯ ಆಯೋಗ ಮನೆಮನೆಗೆ ತೆರಳಿ ವೈಜ್ಞಾನಿಕವಾಗಿ ನಡೆಸಿದ್ದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ರಾಜ್ಯ ಸರ್ಕಾರದ ಕೈಯಲ್ಲಿದೆ. ಆ ವರದಿ ಆಧಾರದಲ್ಲಿ ಮೀಸಲಾತಿಯನ್ನು ಹೆಚ್ಚಿಸಿದರೆ ನ್ಯಾಯಾಲಯ ಕೂಡಾ ಮಾನ್ಯತೆ ನೀಡಲಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ಈಗಾಗಲೇ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ನೀಡಿ ಶೇಕಡಾ 50ರ ಮಿತಿಯನ್ನು ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ನಾಗಮೋಹನ್ ದಾಸ್ ವರದಿ ಜಾರಿ ಬಿಜೆಪಿ ಸರ್ಕಾರಕ್ಕೆ ಬೇಕಿಲ್ಲ: ಸುರ್ಜೇವಾಲಾ

ABOUT THE AUTHOR

...view details