ಬೆಂಗಳೂರು: ಸಿದ್ದರಾಮಯ್ಯ ಅವರ ನಾಲಿಗೆ ಮೇಲೆ ಉಲ್ಟಾ ಮಚ್ಚೆ ಇರಬೇಕು, ಹಾಗಾಗಿ ಅವರು ಹೇಳಿದ್ದೆಲ್ಲಾ ಉಲ್ಟಾ ಆಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಹೇಳಿದ್ದರು. ಇದಕ್ಕೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಅಪ್ಪನಾಣೆಗೂ ಮೋದಿ ಪ್ರಧಾನಿಯಾಗಲ್ಲ ಎಂದು ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು. ಆದರೆ ಮೋದಿ ಅವರು ಎರಡು ಬಾರಿ ಪ್ರಧಾನಮಂತ್ರಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ ಅಂತ ಹೇಳಿದ್ರು. ಆದರೆ ಬರಲಿಲ್ಲ. ಹೀಗಾಗಿ ಅವರು ಏನು ಹೇಳುತ್ತಾರೋ ಅದಕ್ಕೆ ತದ್ವಿರುದ್ಧವಾಗಿ ನಡೆಯುತ್ತದೆ ಎಂದಿದ್ದರು.
ಸಂಬಂಧಿತ ಲೇಖನ: ಸಿದ್ದರಾಮಯ್ಯನವರ ಬಾಯಲ್ಲಿ ಉಲ್ಟಾ ಮಚ್ಚೆಯಿದೆ: ಸಿ.ಟಿ.ರವಿ
ಕೆಲವರ ಬಾಯಲ್ಲಿ ಮಚ್ಚೆ ಇರುತ್ತೆ. ಅವರು ಹೇಳಿದ್ದು ನಡೆಯುತ್ತದೆ. ಆದರೆ ಸಿದ್ದರಾಮಯ್ಯ ಅವರ ನಾಲಗೆಯಲ್ಲಿ ಉಲ್ಟಾ ಮಚ್ಚೆ ಇರಬೇಕು ಹಾಗಾಗಿ ಅವರು ಹೇಳಿದ್ದೆಲ್ಲ ಉಲ್ಟಾ ಆಗುತ್ತದೆ ಎಂದು ಸಿ ಟಿ ರವಿ ವ್ಯಂಗ್ಯವಾಡಿದ್ದರು. ಇದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಸಿ ಟಿ ರವಿ ಅವರೇ ಶೀಘ್ರ ಸಂಪುಟ ಸಚಿವರಾಗಲಿ ಎಂದು ಹಾರೈಸುತ್ತೇನೆ. ನನ್ನ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂಬ ನಿಮ್ಮ ನಂಬಿಕೆ ನಿಜವಾಗಲಿ ಎಂದು ಟಾಂಗ್ ನೀಡಿದ್ದಾರೆ. ಇವರ ಈ ಟ್ವೀಟ್ಗೆ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಬಾಸ್ ನಿಮ್ಮ ಲೆವೆಲ್ಲೇ ಬೇರೆ.... ಎಣ್ಣೆ ನಶೆಯಲ್ಲಿ ಇರುವ ರವಿ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ರೆ, ಬೆಳೆಸಿದ ಪಕ್ಷಕ್ಕೆ ಕೈ ಕೊಟ್ಟು, ಬಂದ ಪಕ್ಷದಲ್ಲಿ ಮೋಸ ಮಾಡಿ ಪರಮೇಶ್ವರ ಅವರನ್ನು ಸೋಲಿಸಿ ಮುಖ್ಯಮಂತ್ರಿ ಆಗಿದ್ರಿ. ಆದ್ರೆ ರವಿ ಹಾಗಲ್ಲ. ತಳ ಮಟ್ಟದಿಂದ ಸ್ವಂತ ಬಲದಿಂದ ಬೆಳೆದ ನಾಯಕ ಎಂದು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.