ಬೆಂಗಳೂರು :ಆರ್ಥಿಕವಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಗರದಲ್ಲಿರುವ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಜೆಟ್ ಸಂದರ್ಭದಲ್ಲಿ ಅನಗತ್ಯ ವೆಚ್ಚ ಕಡಿಮೆ ಮಾಡಲು ಸಲಹೆ ನೀಡಿದ್ದೆ. ವಿಧವಾ, ವೃದ್ಧಾಪ್ಯ ವೇತನ ನೀಡಲು ಹಣವಿಲ್ಲ. ಈ ನಿಗಮ ಮಂಡಳಿ ಯಾಕೆ ಮಾಡಿದ್ದಾರೋ ಗೊತ್ತಿಲ್ಲ.
ಯಡಿಯೂರಪ್ಪ ಹೋಗೋದು ಗ್ಯಾರಂಟಿ ಆಗಿರಬೇಕು. ಹೀಗಾಗಿ, ತರಾತುರಿಯಲ್ಲಿ ನಿಗಮ ಮಂಡಳಿ ಮಾಡಿದ್ದಾರೆ. ಹಣಕಾಸಿನ ಮುಗ್ಗಟ್ಟು ಇರುವಾಗ ನಿಗಮ ಮಂಡಳಿ ಮಾಡಿರೋದು ರಾಜ್ಯಕ್ಕೆ ಎಸಗಿರುವ ದ್ರೋಹ ಎಂದರು.
ಲೂಟಿ ಸರ್ಕಾರ :ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಫೀಸ್ ನೀಡದಿದ್ರೆ ಆನ್ಲೈನ್ ಕ್ಲಾಸ್ ನಡೆಸೋದಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೊರೊನಾ ಇರುವಂತಹ ಈ ಸಮಯದಲ್ಲಿ ಫೀಸ್ ನೀಡದಿದ್ರೆ ಆನ್ಲೈನ್ ಕ್ಲಾಸ್ಗಳನ್ನು ನಡೆಸೋದಿಲ್ಲ ಎಂಬುದು ಮೂರ್ಖತನ ಹಾಗೂ ಜನ ವಿರೋಧಿ ಕ್ರಮವಾಗಿದೆ.
ಸರ್ಕಾರ ಇವರ ಜೊತೆ ಶಾಮೀಲಾಗಿದೆ. ಈ ಯಡಿಯೂರಪ್ಪನವರ ಸರ್ಕಾರ ಬರೀ ಲೂಟಿ ಮಾಡುವ ಸರ್ಕಾರ ಎಂದು ಆರೋಪಿಸಿದರು.