ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಎಂ ಕಚೇರಿಯ ಅಧಿಕೃತ ಸರ್ಕಾರಿ ಜಾಲತಾಣವನ್ನು ಕೆಪಿಸಿಸಿ ಕಚೇರಿಯ ಜಾಲತಾಣದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ. ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಖಾತೆಗಳನ್ನು ಸಿದ್ದರಾಮಯ್ಯ ರಾಜಕೀಯ ದುರುದ್ದೇಶದ ಹೇಳಿಕೆಗಳನ್ನು ಬಿತ್ತರಿಸಲು ಬಳಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳ ಕಚೇರಿ ಮತ್ತು ಸವಲತ್ತುಗಳು ಆಡಳಿತ ನೀಡುವುದಕ್ಕೇ ಹೊರತು ರಾಜಕೀಯ ದ್ವೇಷ ಸಾಧನೆಗಲ್ಲ.
ಬಿಜೆಪಿ ಟ್ವೀಟ್ ವಿವರ: @CMofKarnataka ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆಯಲ್ಲ ಎಂಬುದು ತಿಳಿದಿರಲಿ. ಸರಕಾರಿ ಅಧಿಕಾರಿಗಳನ್ನೂ ತಮ್ಮ ರಾಜಕೀಯ ದುರುದ್ದೇಶಗಳನ್ನು ಈಡೇರಿಸಲು ಬಳಸಿಕೊಳ್ಳುತ್ತಿದ್ದೀರಿ. ಅವರನ್ನು ಕೆಪಿಸಿಸಿ ಆಳುಗಳಂತೆ ದುರುಪಯೋಗ ಮಾಡುತ್ತಿರುವಿರಿ. ಹೈಕಮಾಂಡ್ನ ಏಜೆಂಟರಿಂದ ಅವರಿಗೆ ನೇರ ಆದೇಶ ಕೊಡಿಸುವ ಮಟ್ಟಕ್ಕೆ ಘನ ಸರ್ಕಾರವನ್ನು ತಂದು ನಿಲ್ಲಿಸಿರುವುದು ರಾಜ್ಯದ ಪಾಲಿನ ದುರಂತ ಎಂದು ಬಿಜೆಪಿ ಟೀಕಿಸಿದೆ.
ನಾವು ಅಧಿಕಾರಕ್ಕೆ ಬರಲಿದ್ದೇವೆ, ನಿಮ್ಮನ್ನು ನೋಡಿಕೊಳ್ಳುತ್ತೇವೆಂದು ಡಿ.ಕೆ. ಶಿವಕುಮಾರ್ ಪೊಲೀಸರ ವಿರುದ್ಧ ಚುನಾವಣಾ ಪೂರ್ವದಲ್ಲೇ ಬೆದರಿಕೆ ಹಾಕಿದ್ದರು. ಸಿದ್ದರಾಮಯ್ಯ ಅವರ ಹಿಟ್ಲರ್ ಸರ್ಕಾರ 2.0 ಆಡಳಿತದಲ್ಲಿ ಮತ್ತೆ ಅಕ್ರಮ ಮರಳು ಮಾಫಿಯಾ ದಂಧೆ ತಲೆ ಎತ್ತಿದೆ. ಪ್ರೆಸ್ಮೀಟಾಸುರ ಪ್ರಿಯಾಂಕ್ ಖರ್ಗೆ ಅವರೇ, ತಮ್ಮದೇ ಉಸ್ತುವಾರಿಯಲ್ಲಿರುವ ತವರು ಜಿಲ್ಲೆಯಲ್ಲಿ ಕರ್ತವ್ಯ ನಿರತ ಪೇದೆ ಮೇಲೆ ಹತ್ತಿದ ಮರಳು ಟ್ರ್ಯಾಕ್ಟರ್‌ನಿಂದ ನಿಮಗೆಷ್ಟು ಕಮಿಷನ್ ಬಂದಿದೆ? ಪತ್ರಿಕಾಗೋಷ್ಠಿ ನಡೆಸಿ ಬಹಿರಂಗಪಡಿಸಿ ಎಂದು ಸವಾಲೆಸೆದಿದೆ.
ಕರ್ನಾಟಕದಲ್ಲಿ ಶಾಂತಿ ನೆಮ್ಮದಿ ಇಳಿಕೆ, ಜನಸಾಮಾನ್ಯರ ಆತಂಕ ಏರಿಕೆ! ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಟಾಂಗ್ ನೀಡಿದೆ. ರಾಜ್ಯದ ಎಟಿಎಂ ಸರ್ಕಾರ ತನ್ನ ಖಜಾನೆ ತುಂಬಿಸಿಕೊಳ್ಳಲು ಜನರಿಂದ ದರೋಡೆ ಮಾಡುತ್ತಿದೆ. ಬಿಟ್ಟಿ ಗ್ಯಾರಂಟಿಗಳ ಆಸೆ ತೋರಿಸಿ ಜನರಿಗೆ ವಂಚಿಸುತ್ತಿರುವ ಹಿಟ್ಲರ್ ಸರ್ಕಾರ ಏಕಾಏಕಿ ವಿದ್ಯುತ್ ದರ ಏರಿಕೆ ಮಾಡಿ, ಕುಡಿಯುವ ನೀರಿನ ಬೆಲೆಯನ್ನೂ ಹೆಚ್ಚಿಸಿತ್ತು. ನಂದಿನಿ ಹಾಲು ಮುಂದೆ ಇಟ್ಟುಕೊಂಡು ನೀಚ ರಾಜಕೀಯ ಮಾಡಿದ್ದ ಕೆಪಿಸಿಸಿ ಇದೀಗ ಹಾಲಿನ ಬೆಲೆಯಲ್ಲಿಯೂ ಕೈ ಆಡಿಸುವ ಮೂಲಕ ತನ್ನ ಅಸಲಿ ರೂಪವನ್ನು ತೋರಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.
ಸಿದ್ದರಾಮಯ್ಯ ಅವರ ಸರ್ಕಾರದ ಸಂಪುಟದಲ್ಲಿರುವ ಅರ್ಧಕ್ಕಿಂತ ಹೆಚ್ಚು ಸಚಿವರ ವಿರುದ್ಧ ಕ್ರಿಮಿನಲ್ ಕೇಸುಗಳಿವೆ! ಆ ಸ್ಥಾನಕ್ಕೆ ಅರ್ಹತೆ ಪಡೆಯಲು ಇದೀಗ ಕೆಲ ಶಾಸಕರುಗಳ ಮಕ್ಕಳು ಅಭ್ಯಾಸ ಪ್ರಾರಂಭಿಸಿದಂತಿದೆ! ಎಟಿಎಂ ಸರ್ಕಾರದ ಕ್ರಿಮಿನಲ್ ಕುಮ್ಮಕ್ಕು! ಎಂದು ಕುಹಕವಾಡಿದೆ.ಕಾಂಗ್ರೆಸ್ ಗ್ಯಾರಂಟಿ ಎಂಬುದು ನೀರಿನ ಮೇಲಿನ ಬರಹ! ದಿನಕ್ಕೊಂದು ಕುಂಟು ನೆಪ ಹೇಳಿ ತಮ್ಮ ಬೋಗಸ್ ಗ್ಯಾರಂಟಿ ಅನುಷ್ಠಾನದಿಂದ ತಪ್ಪಿಸಿಕೊಂಡು ರಾಜ್ಯದ ಮಹಿಳೆಯರಿಗೆ ಮಹಾಮೋಸ ಎಸಗುತ್ತಿದೆ. ಈ ಎಟಿಎಂ ಸರ್ಕಾರ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ರಾಜ್ಯದಲ್ಲೀಗ ತಾಜಾ ತುಘಲಕ್ ದರ್ಬಾರ್ ನಡೆಯುತ್ತಿದೆ. ಹಿಟ್ಲರ್ ಸರ್ಕಾರ ಮತ್ತು ತಲೆಕೆಳಗಾಗಿರುವ ಕೆಪಿಸಿಸಿಯ ಗ್ಯಾರಂಟಿಗಳ ವೈಫಲ್ಯ ಮತ್ತು ಅವುಗಳಿಂದಾಗುತ್ತಿರುವ ತೊಂದರೆಗಳ ಬಗ್ಗೆ ಯಾರು ಏನೇ ಮಾತನಾಡಿದರೂ ಅವರ ವಿರುದ್ಧ ಸುಳ್ಳು ಕೇಸ್ ದಾಖಲಿಸುತ್ತಾ ಚೀನಾ-ಪಾಕಿಸ್ಥಾನದಂತೆ ವರ್ತಿಸಲಾರಂಭಿಸಿದೆ ಸಿದ್ದರಾಮಯ್ಯ ಸರಕಾರ! ಪ್ರಜೆಗಳ ಧ್ವನಿಯನ್ನು ದಮನಿಸಿ ಬಹುಕಾಲ ರಾಜ್ಯವಾಳಬಹುದೆಂಬ ಭ್ರಮೆಯಿಂದ ಕಾಂಗ್ರೆಸ್ ಹೊರಬಂದು, ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತಾರದೆ, ಅವರ ಗ್ಯಾರಂಟಿಗಳ ಯೋಚನಾರಹಿತ ಅನುಷ್ಠಾನಗಳಿಂದ ಪ್ರಜೆಗಳು ಅನುಭವಿಸುತ್ತಿರುವ ತೊಂದರೆಗಳನ್ನು ಅರಿತು ಸರಿಪಡಿಸಲಿ ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
ಮಕ್ಕಳು ದೇಶ ಭಕ್ತಿಯ ಪಾಠ ಕಲಿಯುವುದು ಕಾಂಗ್ರೆಸ್ಗೆ ಬೇಡವಾಗಿದೆ:ಪ್ರಭು ಚೌಹಾಣ್
ಕಾಂಗ್ರೆಸ್ ಕರ್ನಾಟಕದಲ್ಲಿ ಅಸ್ತಿರತೆ ನಿರ್ಮಾಣ ಮಾಡಲು ಬೇಕಾದ ಎಲ್ಲ ಕೆಲಸಗಳಿಗೆ ಮುನ್ನುಡಿ ಬರೆಯುತ್ತಿದೆ, ಟಿಪ್ಪುವನ್ನು ಓದಿ ದೇಶಭಕ್ತಿ ಬೆಳೆಸಿಕೊಳ್ಳಲು ಸಾಧ್ಯವೇ ಎಂದು ಪಠ್ಯ ಪರಿಷ್ಕರಣೆ ವಿರುದ್ಧ ಮಾಜಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಗುಡುಗಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಕ್ಕಳು ದೇಶ ಭಕ್ತಿಯ ಪಾಠ ಕಲಿಯುವುದು ಕಾಂಗ್ರೆಸ್ ಸರ್ಕಾರಕ್ಕೆ ಬೇಡವಾಗಿದೆ. ಮತಾಂಧ ಟಿಪ್ಪುವಿನ ಪಾಠ ಮಕ್ಕಳು ಕಲಿತು ಯಾವ ದೇಶಭಕ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಪ್ರಭು ಚೌಹಾಣ್ ಪ್ರಶ್ನಿಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳು ಪೂರೈಸುತಿದ್ದಂತೆ ಸಮುದಾಯಗಳ ನಡುವೆ ಒಡಕು ಮೂಡಿಸಿ ದ್ವೇಷದ ರಾಜಕಾರಣದ ಮೂಲಕ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಔರಾದ ಶಾಸಕ ಪ್ರಭು ಚವ್ಹಾಣ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಘೋಷಿಸಿದ ಗ್ಯಾರೆಂಟಿಗಳು ಈಗಾಗಲೇ ಜನರಲ್ಲಿ ದೊಡ್ಡ ಮಟ್ಟಿನ ಗೊಂದಲಕ್ಕೆ ಎಡೆ ಮಾಡಿದೆ.ಸರಕಾರ ಬಂದ 24 ಗಂಟೆಯಲ್ಲೇ ಗ್ಯಾರಂಟಿ ಜಾರಿಗೆ ಮಾಡುತ್ತೇವೆ ಎಂದು ಘೊಷಣೆ ಮಾಡಿದ್ದರು. ಆದರೆ ಇದೀಗ ಷರತ್ತುಗಳ ಮೇಲೆ ಷರತ್ತುಗಳನ್ನು ವಿಧಿಸುತ್ತಾ ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡಲು ಮತ್ತೆ ಪರಾದಾಡುತ್ತಿದೆ ಎಂದು ಟೀಕಿಸಿದ್ದಾರೆ. ಬಿಜೆಪಿ ಸರಕಾರ ಜನಹಿತವಾಗಿ ಜಾರಿಗೊಳಿಸಿದ ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈಬಿಡಲು ಹೊರಟಿರುವುದು ದ್ವೇಷ ರಾಜಕಾರಣವಲ್ಲದೆ ಮತ್ತೆನು ? ರಾಜ್ಯದೆಲ್ಲೆಡೆ ವಿದ್ಯುತ್ ಬಿಲ್ ಪಾವತಿಗೂ ಜನ ಕೆಲವೆಡೆ ತಗಾದೆ ತೆಗೆದು ಮೀಟರ್ ರೀಡಿಂಗ್‍ಗೆ ಬಂದ ಸಿಬ್ಬಂದಿಗಳೊಂದಿಗೆ ವಾದ ನಡೆಸುತ್ತಿರುವ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗುತ್ತಿವೆ.ಯಾವುದೇ ಸ್ಪಷ್ಟತೆ ಇಲ್ಲದೆ ಯೋಜನೆ ಘೋಷಿಸಿದ್ದರ ಪರಿಣಾಮ ಇದಾಗಿದೆ. ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಆರಂಭದಿಂದಲೆ ಗೊಂದಲಮಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಗ್ಯಾರಂಟಿಗೆ ಕಂಡೀಶನ್ ಯಾಕೆ? ಗ್ಯಾರಂಟಿ ಯೋಜನೆ ನಿಮಗೂ ಇದೆ, ನಮಗೂ ಇದೆ ಎಂದು ಚುನಾವಣೆ ಭಾಷಣದಲ್ಲಿ ಸಿದ್ದರಾಮಯ್ಯ, ಡಿಕೆಶಿ ಘೋಷಿಸಿದ್ದರು ಆದರೆ ಈಗ ? ಕಾಂಗ್ರೆಸ್ ಜನರನ್ನು ಮರಳು ಮಾಡಿ ಅಧಿಕಾರಕ್ಕೇರಿರುವುದು ಇದೀಗ ಸ್ಪಷ್ಟವಾಗಿದೆ. ಈಗಾಲಾದರೂ ಎಚ್ಚೆತ್ತುಕೊಂಡು ದ್ವೇಷ ರಾಜಕಾರಣ ಮಾಡುವ ಬದಲಾಗಿ ಜನರ ತಿರ್ಪನ್ನು ಗೌರವಿಸಿ ಒಳ್ಳೆಯ ಆಡಳಿತ ನೀಡಲಿ ಎಂದು ಚವ್ಹಾಣ ಸಲಹೆ ನಿಡಿದ್ದಾರೆ.
ಇದನ್ನೂಓದಿ:HIGH COURT NEWS: ಕೊರೋನಾ ನಿರ್ಬಂಧದ ನಡುವೆ ಮೇಕೆದಾಟು ಯಾತ್ರೆ.. ಸಿಎಂ, ಡಿಸಿಎಂ ಮತ್ತಿತರರ ವಿರುದ್ಧದ ಪ್ರಕರಣ ರದ್ದು