ಬೆಂಗಳೂರು: ಯಾವುದೇ ವೈಜ್ಞಾನಿಕ ಅಧ್ಯಯನಗಳಿಲ್ಲದೆ ಜಾತಿ ಆಧಾರಿತ ನಿಗಮ-ಪ್ರಾಧಿಕಾರ ಸ್ಥಾಪನೆ ಸಮಾಜ ವಿರೋಧಿ ಮಾತ್ರವಲ್ಲ, ಪ್ರಜಾಪ್ರಭುತ್ವ ವಿರೋಧಿ ತೀರ್ಮಾನ ಕೂಡಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಚುನಾವಣೆಗಳನ್ನು ಸಾಧನೆಯ ಬಲದಿಂದ ಗೆಲ್ಲಲಾಗದ ರಾಜ್ಯದ ಮತಿಹೀನ ಬಿಜೆಪಿ ಸರ್ಕಾರ ಇಂತಹ ಅಗ್ಗದ ತಂತ್ರ-ಕುತಂತ್ರಗಳನ್ನು ಮಾಡಿ ಸಮಾಜವನ್ನು ಒಡೆಯಲು ಹೊರಟಿದೆ ಎಂದು ಆರೋಪಿಸಿದ್ದಾರೆ. ಬಡತನದ ನಿರ್ಮೂಲನೆಯ ಕಾರ್ಯಕ್ರಮಗಳಿಗೆ ವೈಜ್ಞಾನಿಕವಾದ ಅಧ್ಯಯನ ಆಧಾರಿತವಾಗಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಡತನ ನಿರ್ಮೂಲನೆಯ ಪ್ರಾಮಾಣಿಕ ಕಾಳಜಿ ಹೊಂದಿದ್ದರೆ, ಈಗಾಗಲೇ ಅವರ ಮುಂದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಸಲಹೆ ನೀಡಿದ್ದಾರೆ.
ಮೇಲ್ಜಾತಿಯಲ್ಲೂ ಬಡವರಿದ್ದಾರೆ
ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ಬಡತನ ಎಂಬುದು ಜಾತಿ-ಧರ್ಮಗಳನ್ನು ಮೀರಿದ್ದು. ಕೇವಲ ತಳಸಮುದಾಯಗಳಲ್ಲಿ ಮಾತ್ರವಲ್ಲ, ಮೇಲ್ಜಾತಿಗಳಲ್ಲಿಯೂ ಬಡವರಿದ್ದಾರೆ. ಎಲ್ಲ ಜಾತಿ-ಧರ್ಮಗಳ ಬಡವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ರೂಪಿಸುವ ಕಾರ್ಯಕ್ರಮಗಳನ್ನು ನಾನು ಸ್ವಾಗತಿಸುತ್ತೇನೆ.
ಆದರೆ ಕೇವಲ ರಾಜಕೀಯ ಲಾಭಕ್ಕಾಗಿ ನಡೆಸುವ ಇಂತಹ ಕ್ಷುಲ್ಲಕ ಬುದ್ಧಿಯ ಕಸರತ್ತುಗಳನ್ನು ಉಗ್ರವಾಗಿ ಖಂಡಿಸುತ್ತೇನೆ. ಗಡಿಭಾಗದಲ್ಲಿ ಕನ್ನಡ ಮತ್ತು ಮರಾಠಿಗರ ನಡುವೆ ಆಗಾಗ್ಗೆ ಸಂಘರ್ಷ ನಡೆದರೂ ರಾಜ್ಯಾದ್ಯಂತ ಕನ್ನಡಿಗರು ಮತ್ತು ಮರಾಠಿಗರು ಪರಸ್ಪರ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಈಗ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಘೋಷಿಸಿ ಅನಗತ್ಯವಾಗಿ ಕನ್ನಡಿಗರನ್ನು ಕೆರಳಿಸುವ ಮೂರ್ಖತನವನ್ನು ರಾಜ್ಯ ಸರ್ಕಾರ ಮಾಡಿದೆ. ಇದರಿಂದಾಗಿ ರಾಜ್ಯದ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟಾದಲ್ಲಿ ಅದಕ್ಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಹೊಣೆಯಾಗುತ್ತಾರೆ ಎಂದಿದ್ದಾರೆ.
ನನ್ನ ಕಾರ್ಯಕ್ರಮ ಜಾತಿಗೆ ಸೀಮಿತವಾಗಿರಲಿಲ್ಲ:
ನಾನು ಮುಖ್ಯಮಂತ್ರಿಯಾಗಿ ಅನುಷ್ಠಾನಗೊಳಿಸಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಯಾವ ಕಾರ್ಯಕ್ರಮವೂ ನಿರ್ದಿಷ್ಟ ಜಾತಿ-ಧರ್ಮಕ್ಕೆ ಸೀಮಿತವಾದುದಲ್ಲ. ಇವೆಲ್ಲವೂ ಸರ್ವಾಜನಾಂಗದ ಬಡವರ ಕಲ್ಯಾಣ ಕಾರ್ಯಕ್ರಮಗಳು.
ರಾಜಕೀಯ ದ್ವೇಷದಿಂದ ಈ ಕಾರ್ಯಕ್ರಮಗಳನ್ನು ನಿರ್ಲಕ್ಷಿಸುತ್ತಿರುವ ರಾಜ್ಯದ ಬಿಜೆಪಿ ಸರ್ಕಾರ ಬಜೆಟ್ ಬೆಂಬಲ ಇಲ್ಲದ ಯೋಜನೆಗಳನ್ನು ಘೋಷಿಸುವ ಗಿಮಿಕ್ ಮಾಡುತ್ತಿದೆ. ಮೀಸಲಾತಿ, ಸಾಮಾಜಿಕ ನ್ಯಾಯದ ಬಗ್ಗೆ ನಾವು ಮಾತನಾಡಿದಾಗ ನಮ್ಮನ್ನು ಜಾತಿವಾದಿಗಳೆಂದು ಟೀಕಿಸುವ, ಹಂಗಿಸುವ ಬಿಜೆಪಿ ಈಗ ಮಾಡುತ್ತಿರುವುದೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಜಾತಿ-ಜಾತಿಗಳ ನಡುವೆ ಮಾತ್ರವಲ್ಲ, ಭಾಷೆ-ಭಾಷೆ ನಡುವೆ ಕೂಡಾ ಜಗಳ ಹುಟ್ಟುಹಾಕುತ್ತಿದೆ ಎಂದು ಆರೋಪಿಸಿದ್ದಾರೆ.
ಇಂತಹ ತುಘಲಕ್ ನಿರ್ಧಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಗ್ಯತೆ ಇಲ್ಲ. ವೃದ್ಧಾಪ್ಯವೇತನ, ವಿಧವಾ ವೇತನ, ಅಂಗವಿಕಲ ವೇತನಕ್ಕೆ ದುಡ್ಡಿಲ್ಲ. ಅತಿವೃಷ್ಟಿಯಿಂದ ಕಷ್ಟನಷ್ಟಕ್ಕೀಡಾಗಿರುವ ಜನ ಬೀದಿಯಲ್ಲಿದ್ದಾರೆ. ಕೊರೊನಾ ಸೋಂಕಿನಿಂದ ಜನ ಸಾಯುತ್ತಿದ್ದಾರೆ. ಇವೆಲ್ಲಕ್ಕೂ ಸರ್ಕಾರದ ಬಳಿ ಹಣ ಇಲ್ಲ, ಜಾತಿ ನಿಗಮ-ಪ್ರಾಧಿಕಾರಕ್ಕೆ ನೂರಾರು ಕೋಟಿ ಎಲ್ಲಿಂದ ಬಂತು? ಎಂದು ಸಿದ್ದರಾಮಯ್ಯ ಪ್ರಶ್ನೆ ಹಾಕಿದ್ದಾರೆ.