ನವದೆಹಲಿ:ಅಹಿಂದ ನಾಯಕ ಸಿದ್ದರಾಮಯ್ಯ, ಅವಿಚ್ಛಿನ್ನ ಒಕ್ಕಲಿಗ ನಾಯಕರಾಗಿ ಗುರುತಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ರಾಜ್ಯದ ಮುಂದಿನ ಸಿಎಂ, ಡಿಸಿಎಂ ಆಗಿ ಆಯ್ಕೆಯಾಗಿದ್ದಾರೆ. ಹೈಕಮಾಂಡ್ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದ ಬೆನ್ನಲ್ಲೇ ಪ್ರಭಾವಿ ನಾಯಕರು ರಾಜ್ಯದ ಅಭಿವೃದ್ಧಿಗಾಗಿ ಕಂಕಣಬದ್ಧರಾಗಿ ದುಡಿಯುವುದಾಗಿ ಘೋಷಿಸಿದ್ದಾರೆ. ಇಬ್ಬರೂ ಪ್ರಭಾವಿ ನಾಯಕರು ಟ್ವೀಟ್ ಮಾಡುವ ಮೂಲಕ ರಾಜ್ಯದ ಜನರ ಅಭಿವೃದ್ಧಿ, ನೀಡಿದ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದ್ದಾರೆ.
5 ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿದ್ದ ಸಿಎಂ ಪ್ರಹಸನಕ್ಕೆ ಇಂದು ತೆರೆ ಬಿದ್ದಿದೆ. ಮುಖ್ಯಮಂತ್ರಿ ಗಾದಿಗಾಗಿ ಪಟ್ಟು ಹಿಡಿದು ಕುಳಿತಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಹೈಕಮಾಂಡ್ ಕೊನೆಗೂ ಶತಾಯಗತಾಯ ಪ್ರಯತ್ನದಿಂದ ಮನವೊಲಿಸುವಲ್ಲಿ ಯಶ ಕಂಡಿದೆ. ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅವರು 2 ನೇ ಬಾರಿಗೆ ಸಿಎಂ ಪಟ್ಟವನ್ನು ದಕ್ಕಿಸಿಕೊಂಡಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ಅವರ ದೆಹಲಿಯ ನಿವಾಸದಲ್ಲಿ ಸಿಎಂ ಆಯ್ಕೆ ಕಗ್ಗಂಟು ತೀರಿದ ಬಳಿಕ ಇಬ್ಬರ ಕೈಗಳನ್ನು ಮೇಲೆತ್ತಿ ಹಿಡಿದು ಒಗ್ಗಟ್ಟು ಪ್ರದರ್ಶನ ಮಾಡಿದರು. ಜನರ ಆಶೋತ್ತರಗಳಿಗೆ ಸ್ಪಂದಿಸುವ ಸರ್ಕಾರವನ್ನು ನೀಡುವುದಾಗಿ ಎಐಸಿಸಿ ಅಧ್ಯಕ್ಷರು ಹೇಳಿದ್ದರು.
ಡಿಕೆಶಿ ಟ್ವೀಟ್: ಇದಾದ ಬಳಿಕ ಅದೇ ಚಿತ್ರವನ್ನು ಡಿಕೆ ಶಿವಕುಮಾರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು 'ಕರ್ನಾಟಕದ ಸುಭದ್ರ ಭವಿಷ್ಯ ಮತ್ತು ಜನಕಲ್ಯಾಣವೇ ನಮ್ಮ ಆದ್ಯತೆಯಾಗಿದೆ. ಅದನ್ನು ಖಾತರಿಪಡಿಸುವಲ್ಲಿ ನಾವು ಒಗ್ಗಟ್ಟಾಗಿದ್ದೇವೆ' ಎಂದು ದೋಸ್ತಿ ಮಾತನ್ನಾಡುವ ಒಕ್ಕಣೆಯನ್ನು ನೀಡಿದ್ದರು.
ಇದಾದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅದೇ ಚಿತ್ರವನ್ನು ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿ, 'ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ' ಎಂದು ಬರೆದುಕೊಂಡಿದ್ದಾರೆ.
ಮನವೊಲಿಕೆಯಲ್ಲಿ ಹೈಕಮಾಂಡ್ ಸುಸ್ತು:ಮೇ 10 ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿ ಕಾಂಗ್ರೆಸ್ 135 ಸ್ಥಾನಗಳನ್ನು ಪಡೆದುಕೊಂಡು ಏಕಪಕ್ಷವಾಗಿ ಅಧಿಕಾರಕ್ಕೆ ಬಂದಿತ್ತು. ಇದರ ಬೆನ್ನಲ್ಲೇ ಸಿಎಂ ಗಾದಿಗಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಇನ್ನಿಲ್ಲದಂತೆ ಪಟ್ಟು ಹಿಡಿದಿದ್ದರು. ಇದು ಹೈಕಮಾಂಡ್ಗೆ ನಿಜಕ್ಕೂ ಸಾಕುಬೇಕಾಗಿ ಹೋಯಿತು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹಿರಿತನ ಮತ್ತು ವರ್ಚಸ್ಸಿನ ಆಧಾರದ ಮೇಲೆ ಸಿಎಂ ಸ್ಥಾನ ನೀಡಬೇಕು ಎಂದು ವಾದ ಮಂಡಿಸಿದ್ದರೆ, ಡಿಕೆಶಿ ಅವರು, ಕಷ್ಟ ಕಾಲದಲ್ಲಿ ಪಕ್ಷ ಸಂಘಟನೆ, ತನಿಖಾ ಸಂಸ್ಥೆಗಳ ವಿಚಾರಣೆ ನಡುವೆ ಪಕ್ಷವನ್ನು ಅಧಿಕಾರಕ್ಕೆ ತಂದ ಪ್ರತಿಫಲವಾಗಿ ತಮಗೇ ಸಿಎಂ ಸ್ಥಾನ ನೀಡಬೇಕು ಎಂದು ಪ್ರತಿಪಾದಿಸಿದ್ದರು. ಇಬ್ಬರ ವಾದವೂ ಸಮರ್ಥವಾಗಿದ್ದರಿಂದ ಯಾರನ್ನು ಸಿಎಂ ಮಾಡಬೇಕು ಎಂಬುದು ಹೈಕಮಾಂಡ್ಗೆ ದಿಕ್ಕು ತೋಚದಾಗಿತ್ತು.
5 ದಿನ ನಡೆದ ಹಗ್ಗಜಗ್ಗಾಟ:ದೆಹಲಿ ಅಂಗಳಕ್ಕೆ ಬಂದಿದ್ದ ಸಿಎಂ ಆಯ್ಕೆ ಚೆಂಡು, ರಾಷ್ಟ್ರೀಯ ನಾಯಕರನ್ನು ಸುಸ್ತು ಮಾಡಿತ್ತು. ತಮ್ಮ ಪಟ್ಟುಗಳನ್ನ ಸಡಿಲಿಸದೇ ಪ್ರಬಲ ಸೆಡ್ಡು ಹೊಡೆದಿದ್ದ ನಾಯಕರ ಮಧ್ಯೆ ಹೈಕಮಾಂಡ್ ಬೆವರಾಗಿತ್ತು. ಸರಣಿ ಸಭೆಗಳನ್ನು ನಡೆಸಿ ಕೊನೆಯಲ್ಲಿ ಡಿಕೆ ಶಿವಕುಮಾರ್ ಅವರನ್ನೇ ಮನವೊಲಿಸುವ ಮೂಲಕ ದೀರ್ಘ ಪ್ರಹಸನಕ್ಕೆ ಇತಿಶ್ರೀ ಹಾಡಿದೆ.
ಒಪ್ಪಂದಗಳೇನು?:ಸಿಎಂ ಸ್ಥಾನ ಬಿಟ್ಟುಕೊಟ್ಟ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷಗಿರಿಯನ್ನು ಮುಂದುವರಿಸುವುದಾಗಿ ಹೈಕಮಾಂಡ್ ತಿಳಿಸಿದೆ. ಅಲ್ಲದೇ, ಸರ್ಕಾರದಲ್ಲಿ ಒಂದೇ ಡಿಸಿಎಂ ಹುದ್ದೆ ಸ್ಥಾಪಿಸಿ ಅದನ್ನು ಡಿಕೆಗೆ ನೀಡಲು ಒಪ್ಪಿದೆ. ಇದಲ್ಲದೇ, ಕೆಲ ಪ್ರಬಲ ಖಾತೆಗಳನ್ನೂ ನೀಡುವುದಾಗಿಯೂ ತಿಳಿಸಿದೆ ಎಂದು ಹೇಳಲಾಗಿದೆ.
ಇದೇ 20ರಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯ ಜೊತೆಗೆ ಕೆಲವು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ನವದೆಹಲಿಯಲ್ಲಿಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಇದನ್ನೂ ಓದಿ:ಸಿಎಂ ಆಯ್ಕೆ ಪ್ರಹಸನ ಮುಕ್ತಾಯ: ಡಿಕೆಶಿ, ಸಿದ್ದು ಕೈ ಮೇಲೆತ್ತಿ ಖರ್ಗೆ ಒಗ್ಗಟ್ಟು ಪ್ರದರ್ಶನ