ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಂಗಳೂರು: ’’2009ರಲ್ಲಿ ಪ್ರತಿಪಕ್ಷ ನಾಯಕ ಸ್ಥಾನ ನೀಡಿ ಇಲ್ಲವೇ ನನ್ನ ದಾರಿ ನನಗೆ ಎಂದು ಸೋನಿಯಾ ಗಾಂಧಿಗೆ ಬ್ಲಾಕ್ ಮೇಲ್ ತಂತ್ರ ಮಾಡಿ ಖರ್ಗೆಯಿಂದ ಪ್ರತಿಪಕ್ಷ ಸ್ಥಾನ ದಕ್ಕಿಸಿಕೊಂಡಿದ್ದ ಸಿದ್ದರಾಮಯ್ಯ, ಈಗಲೂ ಅದೇ ರೀತಿಯ ಬ್ಲಾಕ್ ಮೇಲ್ ತಂತ್ರ ಮಾಡುತ್ತಿದ್ದಾರೆ‘‘ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
’’ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ನನ್ನ ದಾರಿ ನನಗೆ ಎಂದು ಸೋನಿಯಾ ಗಾಂಧಿಗೆ ಫೋನ್ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾರೆ. ಹೀಗಾಗಿ ಸಿಎಂ ಆಯ್ಕೆ ಕಗ್ಗಂಟಾಗಿದೆ’’ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷರೂ ಆಗಿರುವ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’’ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಈ ಬಾರಿ ನಾನು ಸಿಎಂ ಆಗಿಲ್ಲ ಅಂದರೆ ನನ್ನ ಜನ್ಮದಲ್ಲಿ ಸಿಎಂ ಆಗೋಕೆ ಸಾಧ್ಯವೇ ಇಲ್ಲ ಎಂದು ಗೊತ್ತಾಗಿ ಪಟ್ಟು ಹಿಡಿದಿದ್ದಾರೆ. ಸಿದ್ದರಾಮಯ್ಯ ಸಿ ಎಂ ಆಗಿ, ಪ್ರತಿಪಕ್ಷ ನಾಯಕರಾಗಿ ಈಗ ಮತ್ತೆ ಸಿಎಂ ಆಗಲು ಹೊರಟಿದ್ದಾರೆ. 2009 ರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಬ್ಲಾಕ್ ಮೇಲ್ ಮಾಡಿದ್ದರು‘‘ ಎಂದು ಅವರು ಆರೋಪಿಸಿದ್ದಾರೆ.
’’ಕಾಂಗ್ರೆಸ್ ನಲ್ಲಿ ವಿರೋಧ ಪಕ್ಷ ಸ್ಥಾನ ಕೊಟ್ಟರೆ ಇರುತ್ತೇನೆ, ಇಲ್ಲ ಅಂದರೆ ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂದಿದ್ದರು. ಹಾಗಾಗಿ ಅಂದು ಪ್ರತಿಪಕ್ಷ ನಾಯಕರಾಗಿದ್ದ ಖರ್ಗೆ ಅವರನ್ನು ಲೋಕಸಭೆಗೆ ಕಳುಹಿಸಿ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಮಾಡಲಾಯಿತು. ಈಗಲೂ ಅದೇ ರೀತಿ ಬ್ಲಾಕ್ ಮೇಲ್ ತಂತ್ರ ಮಾಡುತ್ತಿದ್ದಾರೆ. ನನ್ನ ಸಿಎಂ ಮಾಡಿ ಇಲ್ಲವಾದರೆ ನನ್ನ ದಾರಿ ನನ್ನದು ಎಂದು ಮೊನ್ನೆ ಸೋನಿಯಾ ಗಾಂಧಿಗೆ ಕರೆ ಮಾಡಿ ಹೇಳಿದ್ದಾರೆ. ಹೀಗಾಗಿ ಈ ಪರಿಸ್ಥಿತಿ ನಿಭಾಯಿಸಲು ಹೈಕಮಾಂಡ್ಗೆ ಕಷ್ಟ ಆಗುತ್ತಿದೆ‘‘ ಎಂದು ನಾರಾಯಣ ಸ್ವಾಮಿ ಹೇಳಿದ್ದಾರೆ.
2009 ರಿಂದ ಇಲ್ಲಿಯವರೆಗೂ ಸಿದ್ದರಾಮಯ್ಯ ಅಧಿಕಾರದಲ್ಲಿಯೇ ಇದ್ದಾರೆ, 2009 ರಲ್ಲಿ ಪ್ರತಿಪಕ್ಷ ನಾಯಕರಾಗಿ ನಂತರ 2013 ರಲ್ಲಿ ಮುಖ್ಯಮಂತ್ರಿ ಆದರು, 2019 ರಿಂದ ಇಲ್ಲಿಯವರೆಗೆ ಮತ್ತು ಪ್ರತಿಪಕ್ಷ ನಾಯಕರಾಗಿದ್ದರು. ಮೈತ್ರಿ ಸರ್ಕಾರದ ಒಂದು ವರ್ಷ ಮಾತ್ರ ಇವರು ಅಧಿಕಾರದಲ್ಲಿರಲಿಲ್ಲ. ಎರಡು ಬಾರಿ ಪ್ರತಿಪಕ್ಷ ನಾಯಕ, ಒಮ್ಮೆ ಸಿಎಂ ಆಗಿದ್ದ ಸಿದ್ದರಾಮಯ್ಯ ಈಗ ಮತ್ತೆ ಸಿಎಂ ಸ್ಥಾನ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಕೊಟ್ಟಿದ್ದಕ್ಕಿಂತ ಪಡೆದದ್ದೇ ಹೆಚ್ಚು ಎಂದು ವ್ಯಂಗ್ಯವಾಗಿ ಟೀಕಿಸಿದರು.
’‘ಕಾಂಗ್ರೆಸ್ ಅಸಮರ್ಥ ಹೈಕಮಾಂಡ್ ಆಗಿದೆ. ಹಿಂದಿನ ಹೈಕಮಾಂಡ್ ನ ಚರಿತ್ರೆ ನೋಡಿದಾಗ ಒಂದೇ ತೀರ್ಮಾನ ಆಗುತ್ತಿತ್ತು, ಒಂದು ಲಕೋಟೆಯಲ್ಲಿ ಸಿಎಂ ಯಾರು ಎಂದು ಕಳುಹಿಸಲಾಗುತ್ತಿತ್ತು. ಆದರೆ, ಈಗ ಒಂದೇ ತೀರ್ಮಾನ ಮಾಡಲು ಅವರಿಗೂ ತಾಕತ್ ಇಲ್ಲ. ಸಿದ್ದರಾಮಯ್ಯ ಬ್ಲಾಕ್ ಮೇಲ್ ಗೆ ಹೆದರಿಕೊಂಡು ಹೈಕಮಾಂಡ್ ಇನ್ನೂ ತೀರ್ಮಾನ ಮಾಡಿಲ್ಲ‘‘ ಎಂದು ಟೀಕಿಸಿದರು.
ಇದನ್ನೂಓದಿ:ಡಿಕೆಶಿ, ಸಿದ್ದರಾಮಯ್ಯ ಜೊತೆ ಖರ್ಗೆ ಚರ್ಚೆ; ನಾಳೆ ನೂತನ ಸಿಎಂ ಘೋಷಣೆ ಸಾಧ್ಯತೆ..