ಬೆಂಗಳೂರು: ಇಂದು ಮಧ್ಯಾಹ್ನ 12.30ಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಪದಗ್ರಹಣಕ್ಕೆ ವೇದಿಕೆ ಸಜ್ಜಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಹಾಗೂ ಡಿಕೆಶಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಇಂದಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ರಾಜ್ಯಭಾರ ಆರಂಭವಾಗಲಿದೆ.
ಈಗಾಗಾಲೇ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ಮಾಡಲಾಗಿದೆ. ಬಿಜೆಪಿಯೇತರ ಇತರ ರಾಜ್ಯಗಳ ಸಿಎಂಗಳು, ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ರಾಷ್ಟ್ರೀಯ ನಾಯಕರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಈ ಸಂಬಂಧ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಕಾಂಗ್ರೆಸ್ ಶಕ್ತಿ ಪ್ರದರ್ಶನ:ಇಂದು ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಬಿಜೆಪಿಯೇತರ ಸಿಎಂಗಳು ಸೇರಿ ಇತರ ಪಕ್ಷಗಳ ಮುಖಂಡರು ಪಾಲ್ಗೊಂಡು ಬಿಜೆಪಿ ವಿರುದ್ಧ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ. ತಮಿಳುನಾಡು ಸಿಎಂ ಎಂ. ಕೆ ಸ್ಟಾಲಿನ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಬಿಹಾರ ಸಿಎಂ ನಿತೀಶ್ ಕುಮಾರ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಬಿಹಾರ ಡಿಸಿಎಂ ತೇಜಸ್ವಿ ಯಾದವ್, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರ ಮಾಜಿ ಸಿಎಂ ಉದ್ದವ್ ಠಾಕ್ರೆ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬ ಮುಕ್ತಿ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಸಿಪಿಐ ನಾಯಕ ಡಿ. ರಾಜಾ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
15 ಕ್ಕೂ ಹೆಚ್ಚು ಜನರಿಗೆ ಸಚಿವ ಸ್ಥಾನ ಸಾಧ್ಯತೆ: ಇಂದು ನಡೆಯುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ 8 ಮಂದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಎರಡನೇ ಹಂತದಲ್ಲಿ ಸುಮಾರು 15ಕ್ಕೂ ಹೆಚ್ಚು ಮಂದಿ ಮಂತ್ರಿಗಳಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಶುಕ್ರವಾರ ಸಿದ್ದರಾಮಯ್ಯ ಹಾಗೂ ಡಿಕೆಶಿ ದೆಹಲಿಗೆ ತೆರಳಿ ಸಚಿವಾಕಾಂಕ್ಷಿಗಳ ಬಗ್ಗೆ ಹೈ ಕಮಾಂಡ್ ಜತೆ ಚರ್ಚೆ ನಡೆಸಿ, ಸುಮಾರು 20-25 ಸಚಿವರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುಮಾರು 30 ಶಾಸಕರು ದೆಹಲಿಗೆ ತೆರಳಿ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದರು. ತಮ್ಮ ಸಮುದಾಯದ ಸ್ವಾಮಿಗಳ ಮೂಲಕವೂ ಕೆಲವರು ಲಾಬಿ ನಡೆಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಹಿರಿದಾಗಿದ್ದು, ಹೈ ಕಮಾಂಡ್ ಜಾತಿ ಸಮೀಕರಣ, ಪ್ರಾದೇಶಿಕವಾರು, ಸಾಮಾಜಿಕ ನ್ಯಾಯದ ಲೆಕ್ಕಾಚಾರದೊಂದಿಗೆ ಸಚಿವ ಸ್ಥಾನ ನೀಡಲು ಕಸರತ್ತು ನಡೆಸಿದೆ. ಇದರ ಜತೆಗೆ ಹೊಸ ಮುಖಗಳಿಗೂ ಮಂತ್ರಿಗರಿ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಸಮಸೂತ್ರದ ಅನ್ವಯ ಮಂತ್ರಿಗಿರಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸಂಪುಟ ಸೇರುವ ಸಂಭಾವ್ಯರು ಯಾರು?:
ಆರ್.ವಿ ದೇಶಪಾಂಡೆ
ಪ್ರಿಯಾಂಕ್ ಖರ್ಗೆ
ಲಕ್ಷ್ಮಣ್ ಸವದಿ
ಜಗದೀಶ್ ಶೆಟ್ಟರ್
ಕೃಷ್ಣ ಬೈರೇಗೌಡ
ಹೆಚ್.ಸಿ ಮಹದೇವಪ್ಪ
ಯು.ಟಿ ಖಾದರ್