ಬೆಂಗಳೂರು:ದಾವಣಗೆರೆಯಲ್ಲಿ ಭರ್ಜರಿ ಅಮೃತ ಮಹೋತ್ಸವ ಆಚರಿಸಿಕೊಂಡು ವಾಪಸ್ ಆಗಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ವಿಶ್ರಾಂತಿಯಲ್ಲಿದ್ದಾರೆ. ಕಳೆದ ಎರಡ್ಮೂರು ತಿಂಗಳಿನಿಂದ ಅಮೃತ ಮಹೋತ್ಸವ ಸಮಾರಂಭ ಸಂಬಂಧದ ಸಿದ್ಧತೆ ಹಾಗೂ ಪ್ರಗತಿಯ ವಿಚಾರವಾಗಿ ಅವರು ವಿವಿಧ ನಾಯಕರ ಜೊತೆ ನಿರಂತರ ಸಮಾಲೋಚನೆಯಲ್ಲಿದ್ದರು.
ಪಕ್ಷದ ಪ್ರಮುಖ ನಾಯಕರಾಗಿ ಹಾಗೂ ಸದ್ಯದ ಸ್ಥಿತಿಯಲ್ಲಿ ಪಕ್ಷದ ಪ್ರಮುಖ ಆಧಾರಸ್ತಂಭ ತಾವೇ ಎಂಬುದನ್ನು ಈ ಸಮಾರಂಭದ ಮೂಲಕ ಸಿದ್ದರಾಮಯ್ಯ ತೋರಿಸಿಕೊಂಡಿದ್ದಾರೆ. ಈ ಮೂಲಕ ಪಕ್ಷದಲ್ಲಿರುವ ತಮ್ಮ ಪ್ರತಿಸ್ಪರ್ಧಿಗಳಿಗೆ ಸೂಕ್ತ ಉತ್ತರವನ್ನೂ ನೀಡಿದ್ದಾರೆ. ನಾಯಕತ್ವ ವಹಿಸಿಕೊಳ್ಳಲು ಸಾಕಷ್ಟು ನಾಯಕರು ಕಾಂಗ್ರೆಸ್ನಲ್ಲಿ ಪ್ರಯತ್ನ ನಡೆಸುತ್ತಿದ್ದು, ಈ ಕಾರ್ಯಕ್ರಮದ ಯಶಸ್ಸಿನ ಮೂಲಕ ಸಿದ್ದರಾಮಯ್ಯ ಉಳಿದವರನ್ನೆಲ್ಲ ಹಿಂದಿಕ್ಕಿ ಅತ್ಯಂತ ಮುನ್ನೆಲೆಗೆ ಬಂದು ನಿಂತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜ್ವರದಿಂದ ಬಳಲುತ್ತಿದ್ದ ಸಿದ್ದರಾಮಯ್ಯ: ಕಳೆದ ವಾರ ಜ್ವರದಿಂದ ಬಳಲುತ್ತಿದ್ದ ಸಿದ್ದರಾಮಯ್ಯ ಕೊಂಚ ಚೇತರಿಸಿಕೊಂಡು ನಿನ್ನೆಯ ಸಮಾರಂಭದಲ್ಲಿ ಭಾಗಿಯಾಗಿದ್ದರು. ಒಂದು ದಿನ ಮುಂಚಿತವಾಗಿಯೇ ದಾವಣಗೆರೆಗೆ ತೆರಳಿದ್ದ ಅವರು ತಡರಾತ್ರಿವರೆಗೂ ಸಮಾರಂಭದ ಸಿದ್ಧತೆ ಕುರಿತು ಅಭಿಮಾನಿಗಳು ಮತ್ತು ಮುಖಂಡರ ಜೊತೆ ಸಮಾಲೋಚಿಸಿದ್ದರು. ನಾಲ್ಕೈದು ಗಂಟೆಗಳ ಕಾಲ ನಿರಂತರವಾಗಿ ನಡೆದ ಸಮಾರಂಭದಲ್ಲಿ ಬಹಳ ಚಟುವಟಿಕೆಯಿಂದ ಓಡಾಡಿಕೊಂಡಿದ್ದರು.