ಬೆಂಗಳೂರು: ಕಾಂಗ್ರೆಸ್ ಮತ್ತು ಎಸ್ಡಿಪಿಐ ನಡುವಿನ ಹೊಂದಾಣಿಕೆ ಇದೀಗ ಇಡೀ ದೇಶದ ಮುಂದೆ ಅನಾವರಣಗೊಂಡಿದೆ. ಅಧಿಕಾರಕ್ಕಾಗಿ ಏನು ಬೇಕಾದರೂ ಕಾಂಗ್ರೆಸ್ನವರು ಮಾಡುತ್ತಾರೆ ಎನ್ನುವುದು ಬಹಿರಂಗವಾಗಿದೆ. ಹಾಗಾಗಿ ಕಾಂಗ್ರೆಸ್ ಮತ್ತು ಎಸ್ಡಿಪಿಐ ನಡುವಿನ ಒಪ್ಪಂದದ ಕುರಿತು ತನಿಖೆ ಆಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬಂಟ್ವಾಳದಲ್ಲಿ ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಮುಹಮ್ಮದ್ ತುಂಬೆ ಅವರು ಈ ಹಿಂದೆ ಕಾಂಗ್ರೆಸ್ ಜೊತೆ ಹೇಗೆ ಚುನಾವಣೆ ಹೊಂದಾಣಿಕೆ ಇತ್ತು ಅಂತ ಮಾತನಾಡಿದ್ದಾರೆ. ಬಹಳ ವರ್ಷದಿಂದ ಕಾಂಗ್ರೆಸ್ನ ಇನ್ನೊಂದು ಮುಖ ಎಸ್ಡಿಪಿಐ, ಕೆಎಫ್ಡಿ ಮತ್ತು ಪಿಎಫ್ಐ ಎಂದು ಹೇಳಿಕೊಂಡು ಬಂದಿದ್ದೆವು. ಎಸ್ಡಿಪಿಐ ಮತ್ತು ಪಿಎಫ್ಐ ದೇಶಗಳಲ್ಲಿ ಏನೆಲ್ಲಾ ಕೃತ್ಯ ಮಾಡಿಕೊಂಡು ಬಂದಿತ್ತು ಎಂಬುದನ್ನೂ ಹೇಳಿಕೊಂಡು ಬಂದಿದ್ದೇವೆ.
ಎಸ್ಡಿಪಿಐ ಓಲೈಕೆ ಮಾಡುತ್ತಿರುವ ಸಿದ್ದರಾಮಯ್ಯ: ದೇಶವಿರೋಧಿ, ಸಮಾಜ ವಿರೋಧಿ ಕೃತ್ಯ ಮಾಡಿಕೊಂಡು ಬಂದಿವೆ. ಸಿದ್ದರಾಮಯ್ಯ ಸರ್ಕಾರದ ವೇಳೆ ನಮ್ಮ ಅನೇಕ ಯುವಕರ ಹತ್ಯೆ ಆಯಿತು. ಅದರ ಗಂಭೀರ ತನಿಖೆ ಮಾಡದ ಸಿದ್ದರಾಮಯ್ಯ ಎಸ್ಡಿಪಿಐ ಅವರ ಓಲೈಕೆ ಮಾಡುವ ಕೆಲಸ ಮಾಡಿದರು. ಟಿಪ್ಪು ಜಯಂತಿ ಮಾಡುವ ಮೂಲಕ ಓಲೈಕೆ ಮಾಡಿದರು. ಟಿಪ್ಪು ಜಯಂತಿ ಹಿಂದೂ, ಮುಸ್ಲಿಂ ನಡುವೆ ಪರಸ್ಪರ ಜಗಳ ಹುಟ್ಟುಹಾಕುವ ಕೆಲಸ ಆಗಿತ್ತು. ಈ ಜಗಳದ ಪರಿಣಾಮ ಮಡಿಕೇರಿಯಲ್ಲಿ ಕುಟ್ಟಪ್ಪ ಹತ್ಯೆ ಕೂಡ ಆಗಿತ್ತು. ರಾಜ್ಯದ ಬೇರೆ ಬೇರೆ ಕಡೆ ಟಿಪ್ಪು ಜಯಂತಿ ವಿರುದ್ಧ ನಡೆದ ಹೋರಾಟದಲ್ಲಿ ಇಂದಿಗೂ ನಮ್ಮ ಕಾರ್ಯಕರ್ತರು ಕೇಸ್ ಎದುರಿಸುತ್ತಿದ್ದಾರೆ ಎಂದರು.
ಪಿಎಫ್ಐ ದೇಶದಲ್ಲಿ ಭಯೋತ್ಪಾದಕ ಚುಟುವಟಿಕೆ ಮಾಡುತ್ತಿದೆ. ಭಯೋತ್ಪಾದಕರಿಗೆ ಫಂಡಿಂಗ್ ಮಾಡುತ್ತಿದೆ. ನೇತಾರರ ಹತ್ಯೆಗೆ ಯೋಜನೆ ರೂಪಿಸಿದೆ ಎನ್ನುವುದರ ಆಧಾರದಲ್ಲಿ ಪಿಎಫ್ಐ ಬ್ಯಾನ್ ಮಾಡಿದೆ. ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡು ಬ್ಯಾನ್ ಮಾಡಿದೆ. ಬ್ಯಾನ್ ನಂತರ ಪಿಎಫ್ಐನವ ಎಸ್ಡಿಪಿಐಗೆ ಸೇರಿಕೊಂಡಿದ್ದಾರೆ. ಪಿಎಫ್ಐನ ರಾಜಕೀಯ ಮುಖವಾಣಿ ಎಸ್ಡಿಪಿಐ. ಇದಕ್ಕೆ ಮೊದಲು ಇಲ್ಲಿ ಕೆಎಫ್ಡಿ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಹಲವಾರು ಜನ ಬಂಧನಕ್ಕೊಳಗಾಗಿದ್ದರು. ಸಿದ್ದರಾಮಯ್ಯ ಸರ್ಕಾರ 116 ಕೇಸ್ಗಳಲ್ಲಿ ಸಿಕ್ಕಿಬಿದ್ದಿದ್ದ 1700 ಕಾರ್ಯಕರ್ತರನ್ನು ಬಿಡುಗಡೆ ಮಾಡಿದರು.
ಅವರು ಮತ್ತೆ ಸಮಾಜಕ್ಕೆ ಬಂದು ಗೊಂದಲದ ವಾತಾವರಣ ನಿರ್ಮಾಣ ಮಾಡಿದರು. ಕೆಜೆ ಹಳ್ಳಿ ಡಿಜಿ ಹಳ್ಳಿ ಗಲಭೆ ಮಾಡಿದರು. ಮಂಗಳೂರು, ಹುಬ್ಬಳ್ಳಿಯಲ್ಲಿ ಠಾಣೆ ಮೇಲೆ ದಾಳಿ ಪಿಎಫ್ಐ ಕಾರ್ಯಕರ್ತರು ಮಾಡಿದ್ದರು. ಅದೇ ಕಾರ್ಯಕರ್ತರು ಈಗ ಎಸ್ಡಿಪಿಐನ ಕಾರ್ಯಕರ್ತರಾಗಿದ್ದಾರೆ. ಇಂದು ಎಸ್ಡಿಪಿಐನ ರಾಷ್ಟ್ರೀಯ ಕಾರ್ಯದರ್ಶಿ 25 ಜನರ ಸ್ಪರ್ಧೆಗೆ ಚಿಂತನೆ ಮಾಡಿದ್ದೆವು, ಕಾಂಗ್ರೆಸ್ ಮನವಿ ಮೇರೆಗೆ 5 ಕಡೆ ಮಾತ್ರ ಸ್ಪರ್ಧೆ ಮಾಡಿದ್ದೆವು ಎಂದಿದ್ದಾರೆ. ಇದನ್ನೆಲ್ಲಾ ನೋಡಿದರೆ ಕೇಸ್ ವಾಪಸ್ ಪಡೆದಿದ್ದು ಈ ಒಡಂಬಡಿಕೆಯ ಭಾಗ ಎನ್ನುವುದು ಸ್ಪಷ್ಟವಾಗಿದೆ.