ಬೆಂಗಳೂರಿನಲ್ಲಿ ಹಬ್ಬದ ಶಾಪಿಂಗ್ ಬೆಂಗಳೂರು:ಸೋಮವಾರದ ಆಯುಧಪೂಜೆ ಮತ್ತು ನಾಳಿನ ವಿಜಯದಶಮಿ ಹಬ್ಬದ ಖರೀದಿ ಭರಾಟೆ ನಗರದಲ್ಲಿ ಬಿರುಸು ಪಡೆದುಕೊಂಡಿತ್ತು. ಕೆ.ಆರ್.ಮಾರುಕಟ್ಟೆ, ಮಡಿವಾಳ, ಮಲ್ಲೇಶ್ವರ ಮಾರುಕಟ್ಟೆ, ಗಾಂಧಿ ಬಜಾರ್ ಸೇರಿದಂತೆ ನಾನಾ ಮಾರುಕಟ್ಟೆಗಳಲ್ಲಿ ಜನರು ಮುಖ್ಯವಾಗಿ ಹೂವು, ಹಣ್ಣು, ಕುಂಬಳ, ಬೂದಕುಂಬಳ, ನಿಂಬೆಹಣ್ಣುಗಳು ಹಾಗು ಇತರೆ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು.
ಮಾರುಕಟ್ಟೆಗಳಲ್ಲಿ ನಿಂಬೆಹಣ್ಣು ಮತ್ತು ಹೂವಿನ ಬೆಲೆಗಳು ಮಾತ್ರ ಏರಿಕೆಯಾಗಿವೆ. ಅದರಲ್ಲೂ ಬಹು ಬೇಡಿಕೆಯ ಸೇವಂತಿ ಹಾಗು ಚೆಂಡು ಹೂವುಗಳು ಬೆಲೆ ಗ್ರಾಹಕರ ಜೇಬು ಸುಡುವಂತಿತ್ತು. ಇವು ವಾಹನಗಳು, ಮಳಿಗೆಗಳ ಪೂಜೆಗೆ ಅಗ್ರಗಣ್ಯ ಹೂವುಗಳಾಗಿರುವುದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಗೆ ಕಾರಣವಾಗಿತ್ತು.
ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಗುಣಮಟ್ಟದ ಸೇವಂತಿ ಹೂವು ಕೆ.ಜಿಗೆ 200 ರಿಂದ 300 ರೂ ಬೆಲೆಗೆ ಮಾರಾಟವಾಗುತ್ತಿತ್ತು. ಚೆಂಡು ಹೂವು ಕೆ.ಜಿ ಗೆ 100 ರೂ. ತಲುಪಿದೆ. ಈ ಹೂವುಗಳು ಹೆಚ್ಚಾಗಿ ಗೌರಿಬಿದನೂರು, ಮೈಸೂರು ಮತ್ತಿತರ ಭಾಗಗಳಿಂದ ಬಂದಿದ್ದವು. ಮಲ್ಲಿಗೆ ಹೂವು ಕೆ.ಜಿ ಗೆ 700 ರಿಂದ 800 ರೂ. ಗೆ ಮಾರಾಟವಾಗಿದ್ದು, ಬಹುತೇಕ ಹೂವುಗಳು ತಮಿಳುನಾಡಿನಿಂದ ಬಂದಿತ್ತು.
ಈ ಬಾರಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಬೂದಗುಂಬಳವನ್ನು ಹೆಚ್ಚಾಗಿ ಬೆಳೆಯಲಾಗಿದ್ದು, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗಿದೆ. ಗುಣಮಟ್ಟದ ಆಧಾರದಲ್ಲಿ ಸುಮಾರು 60 ರೂ.ಗೆ ಕಾಯಿಗಳು ಹಾಗು ನಿಂಬೆಹಣ್ಣು ಒಂದಕ್ಕೆ 5 ರೂ ನಂತೆ ಮಾರಾಟವಾಗುತ್ತಿತ್ತು.
ಭಾನುವಾರ ಕೂಡ ಮೂಸಂಬಿ ಹಣ್ಣು ಕೆ.ಜಿಗೆ 60 ರೂ, ದಾಳಿಂಬೆ ಹಣ್ಣು 60 ರಿಂದ 80 ರೂ, ಬಾಳೆಹಣ್ಣು ಕೆಜಿಗೆ 70 ರೂ, ಸೇಬು 100 ರೂ, ಸಪೋಟ 70 ರಿಂದ 80 ರೂ, ಸೀತಾಫಲ ಸುಮಾರು 170 ರೂ, ದ್ರಾಕ್ಷಿ ಹಣ್ಣು 250 ರೂ.ಗೆ ವ್ಯಾಪಾರವಾಗಿತ್ತು. ತರಕಾರಿ ದರಗಳ ಪೈಕಿ ಟೊಮೆಟೊ ಮಾತ್ರ ಕಡಿಮೆ ಬೆಲೆ 15 ರೂ. ಗೆ ಮಾರಾಟವಾಗುತ್ತಿದೆ. ಉಳಿದಂತೆ ಬದನೆ 50 ರೂ, ಕ್ಯಾರೆಟ್ 50 ರೂ, ಬೀನ್ಸ್ 100 ರೂ, ಬೀಟ್‌ರೂಟ್ 50 ರೂ, ಉತ್ತಮ ಗುಣಮಟ್ಟದ ಆಲೂಗಡ್ಡೆ 30 ರೂ. ಬೆಲೆ ಇತ್ತು.
ಮಂಡಕ್ಕಿ ದುಬಾರಿ:ಆಯುಧಪೂಜೆ ಹಾಗೂ ವಿಜಯದಶಮಿಗೆ ಮಳಿಗೆಗಳು, ಕಚೇರಿಗಳು, ಕಾರ್ಖಾನೆಗಳಲ್ಲಿ ಪೂಜೆ ಸಲ್ಲಿಸಿದ ನಂತರ ಸಿಬ್ಬಂದಿಗೆ ಸಿಹಿ ಜತೆಗೆ ಕಡ್ಲೆಪುರಿ ವಿತರಿಸಲಾಗುತ್ತದೆ. ಹೀಗಾಗಿ ಮಂಡಕ್ಕಿಗೆ ಹೆಚ್ಚು ಬೇಡಿಕೆ ಉಂಟಾಗಿತ್ತು. ಒಂದು ಸೇರಿಗೆ ಸುಮಾರು 12 ರೂಪಾಯಿವರೆಗೆ ಮಾರಾಟವಾಯಿತು. ಬಾಳೆಕಂಬ, ಅರಿಶಿನ-ಕುಂಕುಮ, ಕರ್ಪೂರ ಮತ್ತಿತರ ಪೂಜಾ ಸಾಮಗ್ರಿಗಳ ಬೆಲೆಯೂ ದುಬಾರಿಯಾಗಿತ್ತು.
ಇದನ್ನೂ ಓದಿ:ಆಯುಧ ಪೂಜೆ-ವಿಜಯದಶಮಿ ಹಬ್ಬ: ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ