ಬೆಂಗಳೂರು:ಮುಸ್ಲಿಂ ಮತದಾರರೇ ನಿರ್ಣಾಯಕರಾಗಿರುವ ಶಿವಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಈ ಸಾರಿ ಸಾಕಷ್ಟು ತುರುಸಿನ ಸ್ಪರ್ಧೆ ನಡೆಯುವ ಸಾಧ್ಯತೆ ಇದ್ದು, ಕಾಂಗ್ರೆಸ್-ಬಿಜೆಪಿಗೆ ಶಾಕ್ ಕೊಡಲು ಜೆಡಿಎಸ್ ಸಿದ್ಧತೆ ನಡೆಸಿದೆ. ರಾಜ್ಯ ರಾಜಕಾರಣದಲ್ಲಿ ಶಿವಾಜಿನಗರ ವಿಧಾನಸಭೆ ಕ್ಷೇತ್ರ ಅಂದಾಗ ತಕ್ಷಣಕ್ಕೆ ನೆನಪಾಗುವುದು ಆರ್. ರೋಷನ್ ಬೇಗ್ ಅವರು.
2019ರ ಉಪಚುನಾವಣೆ ಸೇರಿದಂತೆ 1967 ರಿಂದ ಇದುವರೆಗೂ ನಡೆದಿರುವ 13 ಚುನಾವಣೆಗಳ ಪೈಕಿ ಆರು ಸಾರಿ ರೋಷನ್ ಬೇಗ್ ಅವರೇ ಆಯ್ಕೆಯಾಗಿದ್ದಾರೆ. 1985ರಲ್ಲಿ ಮೊದಲ ಬಾರಿಗೆ ಇವರು ಗೆದ್ದರು. ಇಲ್ಲಿಯವರೆಗೂ ಒಟ್ಟು ಆರು ಸಾರಿ ಗೆಲುವು ಸಾಧಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಉಂಟಾದ ಸ್ಥಿತ್ಯಂತರದಲ್ಲಿ 2019ರಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದರು. ಆದರೆ, ಬಿಜೆಪಿ ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ. ಇದೀಗ ಸದ್ಯ ಅತಂತ್ರ ಸ್ಥಿತಿಯಲ್ಲಿರುವ ಅವರನ್ನು ತನ್ನತ್ತ ಸೆಳೆಯಲು ಜೆಡಿಎಸ್ ತಂತ್ರಗಾರಿಕೆ ನಡೆಸಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಈಗಾಗಲೇ ರೋಷನ್ ಬೇಗ್ ಜತೆ ನಾಲ್ಕೈದು ಸುತ್ತು ಮಾತುಕತೆ ನಡೆಸಿದ್ದಾರೆ. ಕಡೆಯ ಕ್ಷಣದಲ್ಲಿ ರೋಷನ್ ಬೇಗ್ ಜೆಡಿಎಸ್ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. ಇದು ಆದಲ್ಲಿ ಕಾಂಗ್ರೆಸ್ ಗಂಡುಮೆಟ್ಟಿನ ನೆಲೆ ಕೊಂಚ ಅಲ್ಲಾಡುವ ಸಾಧ್ಯತೆ ಇದೆ.
1967ರಲ್ಲಿ ನಡೆದ ಚುನಾವಣೆಯಲ್ಲಿ ಹೆಚ್ಆರ್ಎ ಗಫರ್ ಕಾಂಗ್ರೆಸ್ ಶಾಸಕರಾಗಿ ಗೆದ್ದರು. 1972 ರಲ್ಲಿ ಕಾಂಗ್ರೆಸ್ನ ಎಸ್.ಹಮೀದ್ ಶಾ ಗೆದ್ದರು. 1978ರ ಚುನಾವಣೆಯಲ್ಲಿ ಸಿಎಂ ಇಬ್ರಾಹಿಂ, 1983 ರಲ್ಲಿ ಎಂ. ರಘುಪತಿ, 1985ರಲ್ಲಿ ಆರ್. ರೋಷನ್ ಬೇಗ್ ಜನತಾ ಪಾರ್ಟಿಯಿಂದ ಸ್ಪರ್ಧಿಸಿ ಗೆದ್ದರು. 1989ರಲ್ಲಿ ಕಾಂಗ್ರೆಸ್ನ ಎ.ಕೆ. ಅನಂತಕೃಷ್ಣ ಗೆಲುವು ಸಾಧಿಸಿದರೆ, 1994 ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಆರ್. ರೋಷನ್ ಬೇಗ್ ಗೆದ್ದರು. 1999 ರಲ್ಲಿ ಬಿಜೆಪಿ ಇಲ್ಲಿ ಖಾತೆ ತೆರೆಯಿತು. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಶಾಸಕರಾಗಿ 1999 ಮತ್ತು 2004ರಲ್ಲಿ ಬಿಜೆಪಿಯಿಂದ ಗೆದ್ದರು. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಆಯಿತು. ಆಗ ಹೆಬ್ಬಾಳ ಭಾಗ ಶಿವಾಜಿನಗರ ಕ್ಷೇತ್ರದಿಂದ ಬೇರ್ಪಟ್ಟಿತು. ಅಲ್ಲಿಂದ ಆರಂಭವಾದ ರೋಷನ್ ಬೇಗ್ ಆಗೂ ಕಾಂಗ್ರೆಸ್ ಓಟ ತಡೆರಹಿತವಾಗಿ ಸಾಗಿತು. 2008, 2013 ಮತ್ತು 2018 ರಲ್ಲಿ ರೋಷನ್ ಬೇಗ್ ಕಾಂಗ್ರೆಸ್ನಿಂದ ಗೆದ್ದರು. ಆದರೆ, ಇವರ ರಾಜೀನಾಮೆಯಿಂದ ತೆರವಾದ ಕ್ಷೇತ್ರವನ್ನು ಕಾಂಗ್ರೆಸ್ನಿಂದ ರಿಜ್ವಾನ್ ಅರ್ಷದ್ ಗೆದ್ದರು.
ಗೆದ್ದ ಮತ್ತು ಸೋತ ಅಭ್ಯರ್ಥಿಗಳ ನಡುವಿನ ಅಂತರ ಈ ಸಾರಿಯ ಸಾಧ್ಯತೆ:ಸದ್ಯ 2024ರ ವಿಧಾನಸಭೆ ಚುನಾವಣೆಗೆ ಶಾಸಕ ರಿಜ್ವಾನ್ ಅರ್ಷದ್ ಮರು ಸ್ಪರ್ಧೆಗೆ ಟಿಕೆಟ್ ಬಯಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲವೂ ಇವರಿಗೆ ಇದೆ. ಆದರೆ, ಪಕ್ಕದ ಶಾಂತಿನಗರ ಕ್ಷೇತ್ರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಲಪಾಡ್ ಸಹ ಆಕಾಂಕ್ಷಿಯಾಗಿದ್ದಾರೆ. ಇವರ ಬೆನ್ನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿಂತಿದ್ದಾರೆ. ರೋಷನ್ ಬೇಗ್ ಜೆಡಿಎಸ್ ಅಭ್ಯರ್ಥಿಯಾದರೆ ಅವರಿಗೆ ತಕ್ಕ ಪೈಪೋಟಿ ನೀಡಲು ಆರ್ಥಿಕವಾಗಿ ಸಭಲರಾಗಿರುವ ಅಭ್ಯರ್ಥಿ ಅಗತ್ಯವಿದೆ ಎಂದು ಪಕ್ಷದ ಹೈಕಮಾಂಡ್ಗೆ ಮನವರಿಕೆ ಮಾಡುವ ಕಾರ್ಯವನ್ನು ಡಿಕೆಶಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ಬಿಜೆಪಿಯಿಂದ ಕಳೆದ ಸಾರಿಯ ಅಭ್ಯರ್ಥಿ ಸರವಣ ಹಾಗೂ ಬಿಜೆಪಿ ನಾಯಕ ನಿರ್ಮಲ್ ಕುಮಾರ್ ಸುರಾನಾ ಆಕಾಂಕ್ಷಿಯಾಗಿದ್ದಾರೆ. ಎರಡು ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್ಗಾಗಿ ಪೈಪೋಟಿ ಇದೆ. ಇದರ ಜತೆ ಎಸ್ಡಿಪಿಐ ಅಭ್ಯರ್ಥಿ ಅಬ್ದುಲ್ ಅವರು ಜೆಡಿಎಸ್ ಹಿಂದಿಕ್ಕಿ ತೃತೀಯ ಸ್ಥಾನ ಪಡೆದಿದ್ದರು. ಈ ಸಾರಿ ಆಮ್ ಆದ್ಮಿ ಪಕ್ಷದಿಂದ ಪ್ರಕಾಶ್ ನೆಡುಂಗಡಿ ಸ್ಪರ್ಧೆ ಮಾಡಲಿದ್ದಾರೆ.
ಕ್ಷೇತ್ರದಲ್ಲಿ ಈವರೆಗೆ ಗೆದ್ದದ ಪಕ್ಷಗಳ ಮಾಹಿತಿ ಎನ್.ಎ. ಹ್ಯಾರಿಸ್ ಮತ್ತು ರಿಜ್ವಾನ್ ಅರ್ಷದ್ ಬಹು ಸಂಸ್ಕೃತಿ:ಇಲ್ಲಿ ಬಹು ಸಂಸ್ಕೃತಿ ಇದೆ. ಕನ್ನಡ, ಉರ್ದು, ಅರೇಬಿಕ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಹೀಗೆ ವಿವಿಧ ಭಾಷೆಯನ್ನು ಮಾತನಾಡುವ ಜನ ಇಲ್ಲಿದ್ದಾರೆ. ರಾಮಸ್ವಾಮಿ ಪಾಳ್ಯ, ಜಯಮಹಲ್, ಹಲಸೂರು, ಭಾರತಿ ನಗರ, ಶಿವಾಜಿ ನಗರ, ವಸಂತ ನಗರ, ಸಂಪಂಗಿರಾಮ ನಗರ ವಾರ್ಡ್ ಗಳು ಈ ಕ್ಷೇತ್ರದ ಅಡಿಯಲ್ಲಿ ಬರುತ್ತವೆ. ಬೆಂಗಳೂರಿನ ಹಲವು ಪ್ರದೇಶಗಳಂತೆ ಶಿವಾಜಿನಗರ ಸಹ ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆಯನ್ನು ಎದುರಿಸುತ್ತಿದೆ. ಜೊತೆಗೆ ಕಾನೂನು ಸುವ್ಯವಸ್ಥೆಯ ಬಗ್ಗೆಯೂ ದೂರುಗಳು ಬರುತ್ತಿರುತ್ತವೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಿವರ ಮತದಾರರ ಮಾಹಿತಿ: ಶಿವಾಜಿನಗರ ಕ್ಷೇತ್ರ ಮುಸ್ಲಿಂ ಮತದಾರರು ಹೆಚ್ಚಿರುವ ಕ್ಷೇತ್ರ. ಹೀಗಾಗಿ ಇಲ್ಲಿ ಇವರೇ ನಿರ್ಣಾಯಕ. ಸದ್ಯ ಕ್ಷೇತ್ರದ ಮತದಾರರ ಸಂಖ್ಯೆ 1,96,776 ರಷ್ಟಿದೆ. 99,969 ಪುರುಷರು, 96,803 ಮಹಿಳೆಯರು 4 ಇತರೆ ಮತದಾರರು ಇದ್ದಾರೆ. ಮುಸ್ಲಿಂ ಸೇರಿದಂತೆ ಇತರೇ ಭಾಷಿಕರು, ಎಸ್‌ಸಿ-ಎಸ್‌ಟಿ, ಇತರೇ ಸಮುದಾಯ, ಒಕ್ಕಲಿಗ ಹಾಗೂ ಲಿಂಗಾಯತ ಮತದಾರರಿದ್ದಾರೆ.
ಇದನ್ನೂ ಓದಿ:ಚುನಾವಣೆ ಘೋಷಣೆಗೂ ಮುನ್ನ ಅಖಾಡಕ್ಕಿಳಿದ ಪೊಲೀಸರು: 9 ಲಕ್ಷ ನಗದು, 16 ಲಕ್ಷ ಸೀರೆ ವಶಕ್ಕೆ