ಬೆಂಗಳೂರು: ಹಿರಿಯ ನಾಯಕ, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರು, ಕಾಂಗ್ರೆಸ್ಗೆ ಲಿಂಗಾಯತರು ಓಟು ಹಾಕಿಲ್ಲ ಎನ್ನುವವರು ಮೂರ್ಖರು. ವೀರೇಂದ್ರ ಪಾಟೀಲ್ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಪರ ನಿಂತಿದ್ದಾರೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಮನೂರು ಅವರ ವಿರುದ್ಧ ಯಾರು ಕೌಂಟರ್ ಕೊಡೋದು ಬೇಡ. ಅವರು ಹಿರಿಯರು, ನಮ್ಮ ಯಜಮಾನರು ಅವರು, ಅವರಿಗೆ 92 ವರ್ಷ ಆಗಿದೆ. ನಮ್ಮವರೇ ಹೋಗಿ ಮಾತನಾಡಿದರೆ ತಪ್ಪೇನಿದೆ ಅದರಲ್ಲಿ? ಎಂದು ಪ್ರಶ್ನಿಸಿದರು.
ಶಾಮನೂರು ನಮಗೆಲ್ಲ ಹಿರಿಯರು. ಅವರು ಹೇಳಿದ ವಿಷಯ ಸತ್ಯವೇ ಇರಬಹುದು. ಮಾಧ್ಯಮಗಳ ಮೂಲಕ ಇದನ್ನು ಬಹಿರಂಗವಾಗಿ ಹೇಳುವುದು ಬೇಕಿಲ್ಲ ಅನಿಸುತ್ತದೆ. ಮುಖ್ಯಮಂತ್ರಿ ಅವರಿಗೆ ಹೇಳಿ ಇದನ್ನು ಸರಿಪಡಿಸುವ ತಾಕತ್ತು ನಮಗೆ ಇದೆ. ನನ್ನ ಬಳಿಯೂ ಎರಡು ಮೂರು ಅಧಿಕಾರಿಗಳು ಬಂದಿದ್ರು, ನಾನೇ ಸಿಎಂ ಬಳಿ ಹೇಳಿ ಕೆಲಸ ಮಾಡಿಸಿಕೊಟ್ಟೆ. ಮಾತನಾಡಿ ಮಾತಾಡಿಯೇ ಇಷ್ಟು ವರ್ಷ ಲಿಂಗಾಯತರು ಕಾಂಗ್ರೆಸ್ ನಿಂದ ದೂರವಾಗ್ತಿದ್ರು, ಶಾಮನೂರು ಹೇಳಿದ್ದಾರೆ ಎಂದ ಮೇಲೆ ಸತ್ಯವೇ ಇರುತ್ತದೆ ಎಂದು ವಿನಯ್ ಕುಲಕರ್ಣಿ ತಿಳಿಸಿದ್ರು.
ಸಿಎಂ ಹೊರಗಿನವರಲ್ಲ, ಅವರು ನಮ್ಮದೇ ಕುಟುಂಬದವರು. ಒಂದು ಸಮಾಜದಿಂದ ಯಾರೂ ಸಿಎಂ ಆಗುವುದಿಲ್ಲ. ಒಂದು ಸಮಾಜದಿಂದ ಯಾರೂ ಶಾಸಕರು ಆಗುವುದಿಲ್ಲ. ಅಧಿಕಾರಿಗಳು ಅಥವಾ ರಾಜಕಾರಣಿಗಳಿಗೆ ಸಮಸ್ಯೆ ಆಗುತ್ತಿದ್ದರೆ ಅಂತವರು ನಮ್ಮ ಗಮನಕ್ಕೆ ತರಲಿ. ಅಧಿಕಾರಿಗಳು ನಮ್ಮ ಬಳಿ ಬರಲಿ, ನಾವೇ ಸಿಎಂ ಬಳಿ ಮಾತಾಡ್ತೇವೆ. ಸಿಎಂ ಬಳಿ ಮಾತಾಡೋದಕ್ಕೆ ನಮಗೇನಾಗಿದೆ?. ನಮ್ಮ ನಮ್ಮ ಒಳಗಡೆ ಇದೆಲ್ಲ ಸರಿಪಡಿಸಿಕೊಳ್ಳುತ್ತೇವೆ ಎಂದರು.