ಬೆಂಗಳೂರು :ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನ ನಂದಿನಿಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲಗ್ಗೆರೆ ನಿವಾಸಿ ಆಟೋ ಚಾಲಕ ಅನಿಲ್ ಕುಮಾರ್(36) ಬಂಧಿತ ಆರೋಪಿ. ಸಂತ್ರಸ್ತೆಯ ತಾಯಿ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿರುವ ತಾಯಿಯ ಜೊತೆಗೆ ಸಂತ್ರಸ್ತೆ ಲಗ್ಗೆರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪಕ್ಕದ ಮನೆಯಲ್ಲೇ ಆರೋಪಿ ವಾಸವಾಗಿದ್ದ. ಶನಿವಾರ ಎಂದಿನಂತೆ ತಾಯಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು.
ಸಂಜೆ 7.30ರ ಸುಮಾರಿಗೆ ಮನೆಯಲ್ಲಿ ಬಾಲಕಿ ಏಕಾಂಗಿಯಾಗಿರುವುದನ್ನು ಗಮನಿಸಿದ್ದ ಆರೋಪಿ, ಬಾಲಕಿಯ ಮನೆಗೆ ಹೋಗಿ, ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಈ ವೇಳೆ ಸಂತ್ರಸ್ತೆ ರಕ್ಷಣೆಗಾಗಿ ಕೂಗಿಕೊಂಡರೂ ಬಿಡದೆ ಆಕೆಯ ಬಾಯಿ ಮುಚ್ಚಿ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದ ಎಂದು ಮಾಹಿತಿ ನೀಡಿದ್ದಾರೆ.