ಬೆಂಗಳೂರು: ಇನ್ಮುಂದೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನಾಡಗೀತೆ ಹಾಡುವ ಸಂಪ್ರದಾಯಕ್ಕೆ ಕಡಿವಾಣ ಬೀಳಲಿದೆ. ರಾಷ್ಟ್ರಗೀತೆಯಂತೆ ನಾಡಗೀತೆಯನ್ನೂ ಕಾಲಮಿತಿಯಲ್ಲಿ ಯಾವ ಸಾಲೂ ಕೂಡಾ ಪುನರಾವರ್ತನೆಯಾಗದಂತೆ, ಹಿನ್ನೆಲೆ ಸಂಗೀತಕ್ಕಾಗಿ ವಿರಾಮ ನೀಡದೆ ಹಾಡುವ ನಿಯಮ ಸದ್ಯದಲ್ಲೇ ಜಾರಿಗೆ ಬರಲಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ನಾಡಗೀತೆಗೆ ಕಾಲಮಿತಿ ನಿಗದಿಪಡಿಸುವ ಸಂಬಂಧ ವಿದ್ವಾಂಸರು ಮತ್ತು ಶಿಕ್ಷಣತಜ್ಞರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಯಾರು ಯಾವ ಧಾಟಿಯಲ್ಲಾದರೂ ಹಾಡಲಿ, ಹಿನ್ನಲೆ ಸಂಗೀತ ಯಾವುದೇ ಇರಲಿ,ಯಾವ ರಾಗದಲ್ಲಿ ಬೇಕಾದರೂ ಹಾಡಲಿ, ತಾಳ ಯಾವುದಾದರೂ ಇರಲಿ ಆದರೆ ಗೀತೆಯನ್ನು ನಿಲ್ಲಿಸಿದೆ ಸಂಪೂರ್ಣವಾಗಿ ಹಾಡಬೇಕು ಎನ್ನುವ ಪ್ರಮುಖ ಅಂಶವನ್ನೂ ಸೇರಿಸಿಕೊಂಡಂತೆ ಮಾಹಿತಿಯನ್ನು ವರದಿ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು ಅನುಮೋದನೆ ಹಂತಕ್ಕೆ ಬಂದು ತಲುಪಿದೆ.