ನವದೆಹಲಿ ಪ್ರವಾಸ ಬಳಿಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ಬೆಂಗಳೂರು : ಆಗಸ್ಟ್ 15 ರ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಮತ್ತು ಉಭಯ ಸದನಗಳ ಪ್ರತಿಪಕ್ಷಗಳ ನಾಯಕರ ಆಯ್ಕೆ ಪ್ರಕ್ರಿಯೆ ನಡೆಸುವುದಾಗಿ ಹೈಕಮಾಂಡ್ ನಾಯಕರು ಭರವಸೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಮೂರು ದಿನಗಳ ನವದೆಹಲಿ ಪ್ರವಾಸ ಮುಗಿಸಿ ವಾಪಸಾದ ನಂತರ ಆರ್.ಟಿ ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸಂಸದರು ಅಧಿವೇಶನ ನಡೆಯುವಾಗ ಬರುವಂತೆ ಮನವಿ ಮಾಡಿದ್ದರು. ಅದಕ್ಕಾಗಿ ದೆಹಲಿಗೆ ಹೋಗಿದ್ದೆ. ಈ ವೇಳೆ ನಮ್ಮ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಗೆ ಸಮಯ ಕೇಳಿದ್ದೆ. ಭೇಟಿ ಆದ ಸಂದರ್ಭದಲ್ಲಿ ಪ್ರಸ್ತುತ ಕರ್ನಾಟಕದಲ್ಲಿ ಫಲಿತಾಂಶದ ನಂತರದ ಬೆಳವಣಿಗೆಗಳು ಮತ್ತು ಇಂದು ರಾಜ್ಯ ರಾಜಕಾರಣದಲ್ಲಿ ಏನು ನಡೆಯುತ್ತಿದೆ ಎನ್ನುವ ವಿಚಾರದ ಕುರಿತು ಚರ್ಚಿಸಲಾಯಿತು. ಒಟ್ಟಾರೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಭ್ರಷ್ಟಾಚಾರ, ರಾಜಕೀಯ ಬೆಳವಣಿಗೆ, ಜನರ ನಡುವೆ ಸರ್ಕಾರದ ಬಗ್ಗೆ ಇರುವ ಭಾವನೆ ಕುರಿತು ಹೇಳಿದ್ದೇನೆ ಎಂದರು.
ಇದರ ಜೊತೆ ಲೋಕಸಭಾ ಚುನಾವಣಾ ಸಿದ್ಧತೆ ಕುರಿತು ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆ ಹಾಗೂ ನೂತನ ರಾಜ್ಯಾಧ್ಯಕ್ಷರ ನೇಮಕದ ವಿಚಾರವೂ ಚರ್ಚೆಗೆ ಬಂತು. ಸದ್ಯ ಲೋಕಸಭೆ ಅಧಿವೇಶನ ನಡೆಯುತ್ತಿದೆ. ಅಧಿವೇಶನ ಮುಗಿಯಲಿ, ಆಗಸ್ಟ್ 15 ರ ನಂತರ ಈ ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಭ್ರಷ್ಟಾಚಾರ ಆರೋಪದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ :ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಿನಲ್ಲೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇವರ ಭ್ರಷ್ಟಾಚಾರ ಆರೋಪ ಇಟ್ಟುಕೊಂಟು ಬಿಜೆಪಿ ಬರುವ ದಿನದಲ್ಲಿ ಸುದೀರ್ಘವಾದ, ವ್ಯವಸ್ಥಿತವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗ ಹೋರಾಟ ಮಾಡಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಿಬಿಎಂಪಿಯಲ್ಲಿ ಕಾಮಗಾರಿ ಗುತ್ತಿಗೆ ನೀಡಲು ಎರಡು ರೀತಿಯ ವ್ಯವಸ್ಥೆ ಇದೆ. ಸರ್ಕಾರದಿಂದ ಮಂಜೂರಾದ ಯೋಜನೆ ಮತ್ತು ಬಿಬಿಎಂಪಿ ಹಣದಿಂದ ನಿರ್ವಹಣೆ ಹಾಗು ಇತ್ಯಾದಿ ಕಾಮಗಾರಿಗಳಿವೆ. ಕಾಲ ಕಾಲಕ್ಕೆ ಹಣ ಬಿಡುಗಡೆಯಾದರೆ ಗುತ್ತಿಗೆದಾರರಿಗೆ ಅನುಕೂಲವಾಗಲಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಇದನ್ನು ಸಂಪೂರ್ಣ ಸ್ಟ್ರೀಮ್ ಲೈನ್ ಮಾಡಿದ್ದೆ. ಆನ್ಲೈನ್ ಮಾಡಿದೆ. ಸೀನಿಯಾರಿಟಿ ವ್ಯವಸ್ಥೆ ಪಾಲಿಸಿದೆ. ಹಾಗಾಗಿ ನಮ್ಮ ಕಾಲದಲ್ಲಿ ಬಾಕಿ ಬಹಳ ಕಡಿಮೆ ಇತ್ತು ಎಂದರು.
ನಾವು ಮಂಜೂರು ಮಾಡಿದ್ದ ನಗರೋತ್ಥಾನ ಕಾಮಗಾರಿಗಳಿಗೆ ಮಾರ್ಚ್ ತಿಂಗಳಿನಲ್ಲಿ 650 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೆವು. ಮೇ ತಿಂಗಳಿನಲ್ಲಿ ಬಿಬಿಎಂಪಿಗೆ ಬಂದಿದೆ. ಆದರೂ ಬಾಕಿ ಬಿಲ್ ಪಾವತಿಗಾಗಿ ಗುತ್ತಿಗೆದಾರರು ಎಲ್ಲರ ಭೇಟಿ ಮಾಡುತ್ತಿದ್ದಾರೆ. ಈ ಮಟ್ಟಕ್ಕೆ ಯಾಕೆ ಬಂದಿತು? ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ಕೊಡುವ ಪರಿಸ್ಥಿತಿ ಯಾಕೆ ಬಂತು? ಗುತ್ತಿಗೆದಾರರೇ ಬಾಕಿ ಹಣ ಬಿಡುಗಡೆಗೆ ಕಮಿಷನ್ ಕೇಳಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದು ಕೇವಲ ಬಿಬಿಎಂಪಿಯಲ್ಲ. ಎಲ್ಲ ಇಲಾಖೆಯಲ್ಲಿ ಬಿಲ್ ಕೊಡುವುದಕ್ಕೆ ಹಿಂದಿನ ಸರ್ಕಾರ ಬಿಡುಗಡೆ ಮಾಡಿದ ಹಣ ನೀಡುವುದಕ್ಕೆ ಪರ್ಸಂಟೇಜ್ ಕೇಳುತ್ತಿರುವುದು ವ್ಯಾಪಕವಾಗಿದ್ದು, ಇದು ಸಾರ್ವಜನಿಕವಾಗಿದೆ. ಹೀಗಾಗಿ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ನೋಡುತ್ತಾ ಮೌನ ವಹಿಸಿದ್ದಾರೆ. ಮೌನಂ ಸಮ್ಮತಿ ಲಕ್ಷಣಂ ಎನ್ನುವಂತಿದೆ. ಸದನದಲ್ಲಿ ಸಿಎಂ ವರ್ಗಾವಣೆಯಲ್ಲಿ ಹಣ ಪಡೆದಿಲ್ಲ ಎಂದಿದ್ದರು. ಆದರೂ ಇಲಾಖೆಗಳಲ್ಲಿ ಯಾವ ಪೋಸ್ಟಿಂಗ್ ಹೊಸದಾಗಿ ಆಯಿತು. ಬದಲಾವಣೆಯಾಯಿತು ಎಂಬುದು ಎಲ್ಲರಿಗೂ ಗೊತ್ತು. ಇದು ಎಲ್ಲ ಇಲಾಖೆಯಲ್ಲಿಯೂ ಇದೆ ಮುಖ್ಯಮಂತ್ರಿಗಳಿಗೆ ಗೊತ್ತಿದ್ದೂ ಮೌನ ವಹಿಸಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.
ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡಲಿ : ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ನಿಮ್ಮವರು 40+15% ಕಮಿಷನ್ ಕೇಳ್ತಿದ್ದಾರೆ ಎಂದು ಗುತ್ತಿಗೆದಾರರು ರಾಹುಲ್ ಗಾಂಧಿಗೂ ಟ್ವೀಟ್ ಮಾಡಿದ್ದಾರೆ. ಈಗ ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡಬೇಕಿದೆ. ನಿನ್ನೆ ರಾಹುಲ್ ಗಾಂಧಿ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ರಲ್ಲ. ಇಲ್ಲಿ ರಾಜ್ಯದಲ್ಲಿ ಅವರ ಸರ್ಕಾರವೇ ಭ್ರಷ್ಟಾಚಾರ ಮಾಡುತ್ತಿದೆ. ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡಲಿ 24 ಗಂಟೆ ಒಳಗೆ ಗುತ್ತಿಗೆದಾರರಿಗೆ ಬಾಕಿ ಬಿಲ್ ಬಿಡುಗಡೆ ಮಾಡಿಸಲಿ. ಇಲ್ಲದಿದ್ದರೆ ಈ ಸರ್ಕಾರ ಎಟಿಎಂ ಸರ್ಕಾರ ಅಂತ ಸಾಬೀತಾಗಲಿದೆ ಎಂದು ಮಾಜಿ ಸಿಎಂ ವಾಗ್ದಾಳಿ ನಡೆಸಿದರು.
ಬಿಲ್ ಬಿಡುಗಡೆ ಮಾಡಿ : ಬೆಂಗಳೂರು ನಗರದಲ್ಲಿ ನಮ್ಮ 16 ಜನ ಶಾಸಕರು ಗೆದ್ದಿದ್ದಾರೆ. ಅವರ ಕ್ಷೇತ್ರಗಳಲ್ಲಿ ಅಭಿವೃದ್ಧಿ ನಿಲ್ಲಬಾರದು. ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಮಾಡಲಿ. ನಮ್ಮ ಕಾಲದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಆಗಿದೆ. ಕಳೆದ ಮೂರು ತಿಂಗಳಿನಲ್ಲಿ ಸಾಕಷ್ಟು ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ಗುತ್ತಿಗೆದಾರರಿಗೆ ಹಣ ಕೊಟ್ಟರೆ ಕಾಮಗಾರಿ ಮುಂದುವರೆಯಲಿದೆ. ಒಂದು ವರ್ಷ ಕಾಮಗಾರಿ ನಿಲ್ಲಿಸಿದರೆ ಕಾಮಗಾರಿ ದರ ಹೆಚ್ಚಾಗಲಿದೆ. ಕೂಡಲೇ ಗುತ್ತಿಗೆ ಬಿಲ್ ಪಾವತಿಸಿ ಕಾಮಗಾರಿ ಆರಂಭಕ್ಕೆ ಕ್ರಮ ವಹಿಸಬೇಕು. ಇಲ್ಲದೇ ಇದ್ದಲ್ಲಿ ನಾವು ಕಾನೂನಾತ್ಮಕ ಹೋರಾಟ ನಡೆಸಲಿದ್ದೇವೆ ಎಂದು ಸರ್ಕಾರಕ್ಕೆ ಬೊಮ್ಮಾಯಿ ಎಚ್ಚರಿಕೆ ರವಾನಿಸಿದರು.
ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕುಮ್ಮಕ್ಕು : ನಮ್ಮ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿದ್ದರು. ಆದರೆ ದಾಖಲೆ ಕೊಡಲಿಲ್ಲ. ಅಂದು ನಮ್ಮನ್ನು ಭೇಟಿ ಮಾಡಿದ್ದ ಗುತ್ತಿಗೆದಾರರಿಗೆ ಆನ್ಲೈನ್ ಬಿಲ್ ಪಾವತಿ ವ್ಯವಸ್ಥೆ, ಬಿಲ್ ಪಾವತಿಗೆ ಸೀನಿಯಾರಿಟಿ ವ್ಯವಸ್ಥೆ, ಪ್ಯಾಕೇಜ್ ವ್ಯವಸ್ಥೆ ಭರವಸೆ ನೀಡಿದ್ದೆ, ನಾವು ಗುತ್ತಿಗೆಯಲ್ಲಿ ಪಾರದರ್ಶಕತೆ ತರುವ ಸಲುವಾಗಿ ಹಲವು ಆದೇಶ ಮಾಡಿ ಸಮಿತಿಯನ್ನು ಮಾಡಿದ್ದೆವು. ಅನೇಕ ಕ್ರಮ ಕೈಗೊಂಡಿದ್ದೆವು. ಆದರೆ ಈ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಸಿಗುತ್ತಿದೆ ಎಂದು ಆರೋಪಿಸಿದರು.
ಗುತ್ತಿಗೆದಾರರ ಪತ್ರ ನಕಲಿ ಅಂತಾರೆ, ಚೆಲುವರಾಯಸ್ವಾಮಿ ವಿರುದ್ಧದ ಪತ್ರ ನಕಲಿ ಅಂತಾರೆ, ಈ ಸರ್ಕಾರವೇ ಒಂದು ರೀತಿಯಲ್ಲಿ ನಕಲಿ, ಈ ಸರ್ಕಾರದಲ್ಲಿ ಏನೇ ನಡೆದರೂ ಅದನ್ನು ಫೇಕ್ ಎಂದೇ ಪ್ರತಿಪಾದಿಸಲಾಗುತ್ತದೆ. ಆ ಪತ್ರಗಳ ಹಿಂದೆ ಯಾರು ಇದ್ದಾರೋ? ಇಲ್ಲವೋ? ಮುಖ್ಯವಲ್ಲ. ಘಟನೆ ನಡೆದಿದೆಯೋ ಇಲ್ಲವೋ ಎನ್ನುವುದು ಮುಖ್ಯ. 40 ಪರ್ಸೆಂಟ್ ಆರೋಪದ ಡ್ರಾಫ್ಟ್ ಯಾರ ಮನೆಯಲ್ಲಾಯಿತು? ಎಲ್ಲಿ ಆಯಿತು? ಅದರ ಹಿಂದೆ ಯಾರಿದ್ದರು ಎಂದು ಗೊತ್ತಿಲ್ಲವಾ? ಆ ಅನುಭವದಿಂದಲೇ ಡಿಸಿಎಂ ಡಿ.ಕೆ ಶಿವಕುಮಾರ್ ಈ ಪತ್ರಗಳ ಹಿಂದೆ ಬಿಜೆಪಿಯವರು ಇದ್ದಾರೆ ಎನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ.
ಆದರೆ ಎಲ್ಲ ವಿಚಾರಗಳನ್ನು ಇಟ್ಕೊಂಡು ಬಿಜೆಪಿ ವ್ಯವಸ್ಥಿತವಾಗಿ ಜನರಲ್ಲಿ ಜಾಗೃತಿ ಮೂಡಿಸುವಂಥ ಹೋರಾಟ ಮಾಡಲಿದೆ. ರಾಜ್ಯದಲ್ಲಿ ಒಬ್ಬರು ಸಿಎಂ ಇದ್ದಾರೆ. ಮತ್ತೊಬ್ಬರು ಡಿಸಿಎಂ ಇದ್ದಾರೆ. ಹೆಸರಿಗೆ ಡಿಸಿಎಂ, ವಾಸ್ತವವಾಗಿ ಅವರು ಸೂಪರ್ ಸಿಎಂ, ಸಿಎಂ ಆದೇಶವನ್ನು ಮೀರಿ ಆಡಳಿತ ನಡೆಸುವವರು ಸೂಪರ್ ಸಿಎಂ, ಅವರೇ ಡಿಕೆ ಶಿವಕುಮಾರ್ ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದರು.
ಇದನ್ನೂ ಓದಿ :ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದಿಂದ ಮುಂದುವರೆದ ಬಿಜೆಪಿ ನಾಯಕರ ಭೇಟಿ.. ಅಶೋಕ್ ಸಹಕಾರ ಕೋರಿದ ಅಧ್ಯಕ್ಷ ಕೆಟಿ ಮಂಜುನಾಥ್